ಭೀಮರ ಮರೆತವರ ಕುರಿತು…
ನಿಮ್ಮ ಹೋರಾಟದ ರಥದ
ಗಾಲಿ ಮುರಿದವರು
ಅನ್ಯರಟ್ಟಿಯ ಮನೆಮುಂದೆ
ಜೀತಕ್ಕೆ ನಿಂತು
ಜನರೆದೆಗೆ ನಿಮ್ಮ ಕುರಿತು
ಉದ್ದುದ್ದ ಭಾಷಣದ ಮೂಳೆ ಹೊಡೆವಾಗ
ನನ್ನೊಳಗಿನ ನೋವು ಕವಿತೆ…
ನಿಮ್ಮ ಕನಸುಗಳ
ನನಸು ಮಾಡದೆ
ನಿಮ್ಮ ಹೆಸರೇಳಿಕೊಂಡು
ಸ್ವಾರ್ಥದ ನಶೆತುಂಬಿಕೊಂಡು
ಕಾರುಬಂಗಲೆ ಶ್ರೀಮಂತಿಕೆ ಪಡೆದು
ಐಷರಾಮಿ ಬದುಕಿಗೆ ಶರಣಾದದ್ದ ಕಂಡು
ಕಣ್ಣು ತೇವಗೊಂಡಿದ್ದು ಕವಿತೆ…
ನಿಮ್ಮದೆ ಹೆಸರಿನ ನೂರೆಂಟು-
ಸಂಘಟನೆಗಳು ಹುಟ್ಟಿಕೊಂಡು
ಒಬ್ಬರಿಗೊಬ್ಬರು ಕಾಲೆಳೆದು
ತಮಗೆ ತಾವೇ ನಾಯಕರೆಂದು ಬಿಂಬಿಸಿಕೊಂಡು
ನಿಮ್ಮ ನಾಮವ ದೇಶನಾಡು-
ಊರ ತುಂಬಾ ಹೊತ್ತುತಿರುಗಿ
ಒಗ್ಗೂಡದವರ ನೋಡಿ
ಚೂರಾದ ನನ್ನ ಹೃದಯ ಬಡಿತದ ವೇಗ ಕವಿತೆ…
-ಸಿದ್ದುಜನ್ನೂರ್, ಚಾಮರಾಜ ನಗರ