ಬಳ್ಳಾರಿ, ಜೂ.22: ಖ್ಯಾತ ನಾಟಕಕಾರ ಪಿ.ಬಿ. ಧುತ್ತರಗಿ ಅವರು ರಚಿಸಿರುವ ಮುದುಕನ ಮದುವೆ (ಮಲ ಮಗಳು) ಹಾಸ್ಯ ನಾಟಕ ಜೂ.23 ಶುಕ್ರವಾರ ದಿಂದ ನಗರದಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ಕರ್ಮಿ, ಕಂಪನಿ ಮಾಲೀಕರು ಆದ ಬಿ. ಕುಮಾರಸ್ವಾಮಿ ಅವರು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಮ್ಮ ಮಾಲೀಕತ್ವದ ಚಿತ್ರದುರ್ಗ ಶ್ರೀ ಕುಮಾರೇಶ್ವರ ನಾಟಕ ಸಂಘದ ಆಯೋಜಿಸಿರುವ ಮುದುಕನ ಮದುವೆ ನಾಟಕ ಈವರೆಗೆ ಸುಮಾರು 15000 ಪ್ರದರ್ಶನ ಕಂಡ ಪ್ರಸಿದ್ಧ ನಾಟಕವಾಗಿದ್ದು ಬಳ್ಳಾರಿ ನಗರ ಮತ್ತು ಜಿಲ್ಲೆಯ ರಂಗಾಭಿಮಾನಿಗಳು ನಾಟಕಕ್ಕೆ ಆಗಮಿಸಿ ಪ್ರೋತ್ಸಾಹಿಸ ಬೇಕು ಎಂದು ಮನವಿ ಮಾಡಿದರು.
ನಗರದ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಶ್ರೀ ಶರಣ ಸಕ್ಕರೆ ಕರಡೆಪ್ಪನವರ ಚೌಕಿ ಆವರಣ (ಬಾಲಾಂಜನೇಯ ದೇವಸ್ಥಾನ ರಸ್ತೆ)ದಲ್ಲಿ ನಾಟಕದ ಕ್ಯಾಂಪ್ ಹಾಕಲಾಗಿದ್ದು ನಾಲ್ಕು ಜನ ಸ್ತ್ರೀ ಪಾತ್ರಧಾರಿಗಳು ಸೇರಿದಂತೆ 15 ಜನ ಕಲಾವಿದರು ಅಭಿನಯಿಸುವರು. ನಾಟಕಕ್ಕೆ ಬೆಂಗಳೂರಿನ ಸತೀಶ್ ಅವರ ಸಂಗೀತ ನಿರ್ದೇಶನವಿದೆ ಎಂದರು.
ಪ್ರತಿದಿನವೂ ಮಧ್ಯಾಹ್ನ 3 ಗಂಟೆ ಮತ್ತು ಸಂಜೆ 6-30 ಗಂಟೆ ಎರಡು ಪ್ರದರ್ಶನವಿರುತ್ತದೆ. ಕನಿಷ್ಟ ಮೂರು ತಿಂಗಳು ಬಳ್ಳಾರಿಯಲ್ಲಿ ವಾಸ್ತವ್ಯ(ಕ್ಯಾಂಪ್) ಇರುತ್ತದೆ. ನಗರದ ನಾಟಕ ಪ್ರಿಯರ ಬೆಂಬಲ ಇದ್ದರೆ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಆರು ದಶಕಗಳ ತಮ್ಮ ಸುದೀರ್ಘ ರಂಗಭೂಮಿಯ ಅನುಭವಗಳನ್ನು ಹಂಚಿಕೊಂಡ 81ರ ಹರೆಯದ ಕುಮಾರಸ್ವಾಮಿ ಅವರು ಕಲಾಬದುಕಿನಲ್ಲಿ ಬೆಲ್ಲಕ್ಕಿಂತ ಬೇವನ್ನೇ ಉಂಡಿದ್ದೇ ಹೆಚ್ಚು ಎಂದು ಹೇಳಿದರು.
ಈ ಹಿಂದೆ ಐದು ಬಾರಿ ಬಳ್ಳಾರಿಯಲ್ಲಿ ತಮ್ಮ ಸಂಘದ ಕ್ಯಾಂಪ್ ಹಾಕಿದಾಗ ರಂಗ ಪ್ರಿಯರ ಬೆಂಬಲ ಅಭೂತಪೂರ್ವವಾಗಿತ್ತು. ಆರನೇ ಈ ಬಾರಿಯೂ ಉತ್ತೇಜಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಕಲಾವಿದರ ಸಂಘದ ಸಂಚಾಲಕ, ಹಿರಿಯ ರಂಗಕರ್ಮಿ ಕೆ.ಜಗದೀಶ್, ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಹೆಚ್.ತಿಪ್ಪೇಸ್ವಾಮಿ, ಕಲಾಪೋಷಕ ಹಲಕುಂದಿ ಭೀಮರೆಡ್ಡಿ, ಕಲಾವಿದರಾದ ಚಂದ್ರಶೇಖರಯ್ಯ, ಜಿ.ನಾಗನಗೌಡ, ಕುಮಾರ ಗೌಡ, ಕಾಸೀಂ ಭಾಷಾ, ವಸಂತ ಕುಮಾರ್, ಸುಬ್ಬಣ್ಣ ಶಿಳ್ಳೇಕ್ಯಾತರ ಮತ್ತಿತರರು ಇದ್ದರು.
*****