ಡಾ.ಎಚ್.ಟಿ. ಪೋತೆ
ವಿಜಯಪುರ, ಜೂ. 25: ಹತ್ತನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಎಚ್.ಟಿ. ಪೋತೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅವರು ಪ್ರಕಟಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಗದಗಿನ ದಲಿತ ಸಾಹಿತ್ಯ ಪರಿಷತ್ತು ಜು.29 ಮತ್ತು 30ರಂದು ನಗರದ ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಡಾ.ಅರ್ಜುನ ಗೊಳಸಂಗಿ
ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪೋತೆ ಅವರು ನಾಡಿನ ಮಹತ್ವದ ಅಂಬೇಡ್ಕರವಾದಿ ಲೇಖಕರಾಗಿದ್ದಾರೆ.
ಪರಿಚಯ: ಪ್ರೊ. ಎಚ್ ಟಿ ಪೋತೆಯವರು ಮೂಲತಃ ಜಾನಪದ ವಿದ್ವಾಂಸರು. ಆದರೂ ಕತೆ, ಪ್ರಬಂಧ, ಕಾದಂಬರಿ, ವಚನ ಸಾಹಿತ್ಯ, ದಲಿತ ಸಾಹಿತ್ಯ, ವಿಚಾರ, ವಿಮರ್ಶೆ ,ಹಾಯ್ಕುಗಳು ಮೊದಲಾದ ಪ್ರಕಾರಗಳ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳು’ ಸು. ೧೫ ಸಂಪುಟಗಳನ್ನು, ‘ದಲಿತ ಸಾಹಿತ್ಯ ಸಂಪುಟಗಳು’ ಸು. ೬ ಸಂಪುಟಗಳು, ‘ಕನ್ನಡ ಬೌದ್ಧ ಸಾಹಿತ್ಯ ಸಂಪುಟಗಳು’ ಆರು ಸಂಪುಟಗಳು ಹೀಗೆ ಬೃಹತ್ ಸಂಪುಟಗಳ ಪ್ರಧಾನ ಸಂಪಾದನಕಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಬಹುಮುಖ್ಯವಾಗಿ ಇವರು ಕನ್ನಡ ದಲಿತ ಸಾಹಿತ್ಯದಲ್ಲಿ ಅಂಬೇಡ್ಕರ್ ವಾದಿ ಚಿಂತನೆಗಳನ್ನು ಗಂಭೀರ ನೆಲೆಯಲ್ಲಿ ತಾತ್ವಕವಾಗಿ ಮೈಗೂಡಿಸಿಕೊಂಡಿರುವ ವಿಶಿಷ್ಟ ಹಾಗೂ ಅಪರೂಪದ ಲೇಖಕರು ಮತ್ತು ಚಿಂತಕರು. ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ ಮತ್ತು ಉರ್ದು ಭಾಷೆಗಳಲ್ಲಿ ಇವರ ಪ್ರಧಾನ ಸಂಪಾದಕತ್ವದಲ್ಲಿಅಂಬೇಡ್ಕರ್ ವಾಚಿಕೆಗಳು ಪ್ರಕಟಗೊಂಡಿವೆ. ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡ ಶ್ರೀಯುತರು ಜನಸಮುದಾಯದಲ್ಲಿಯೂ ಅಂಬೇಡ್ಕರ್ ಚಿಂತನೆಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಹಗಲಿರುಳೆನ್ನದೆ ತಮ್ಮ ಬರಹ ಭಾಷಣಗಳ ಮುಖಾಂತರ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ತರುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವಕ್ಕೂ ಪಾತ್ರರಾಗಿದ್ದಾರೆ. ಹೀಗೆ, ಡಾ. ಎಚ್. ಟಿ. ಪೋತೆಯವರು ಸಾಹಿತ್ಯ ಸಂಘಟನೆ ಹಾಗೂ ಹೋರಾಟಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ಗುರುತಿಸಿಕೊಂಡಿದ್ದಾರ
ದಲಿತ ಸಾಹಿತ್ಯ ಕ್ರೇತ್ರಕ್ಕೆ ಒಟ್ಟು ೧೫ಕ್ಕೂ ಹೆಚ್ಚು ಕೃತಿಗಳ ಕೊಡುಗೆಯನ್ನು ಡಾ. ಪೋತೆ ಅವರು ನೀಡಿದ್ದಾರೆ.
೧)ಅಂಬೇಡ್ಕರ್ : ದಲಿತ ಚಳುವಳಿ ೨) ದಲಿತಾಂತರಂಗ
೩)ಅಂಬೇಡ್ಕರ್ ಸಂವೇದನೆ ೪) ದಲಿತ ಸಾಹಿತ್ಯ : ಸಂಸ್ಕೃತಿ ೫)ದಲಿತಲೋಕ ೬)ಸ್ವಾತಂತ್ರ ಪೂರ್ವದ ದಲಿತ ಚಳುವಳಿ ೭) ಅಂಬೇಡ್ಕರ್ ಕಥನ ೮)ಅಂಬೇಡ್ಕರ್ ಭಾರತ ೯) ದಲಿತ ಕಥನ. ೧೦) ದಲಿತ ಚಳುವಳಿ ಕಥನ ೧೧) ಜೀವನ ಕಥನ ೧೨)ಅಂಬೇಡ್ಕರ್ ಪುಸ್ತಕ ಪೀತಿ ೧೩)ಅಂಬೇಡ್ಕರ್ ಫಸಲು ೧೪)ಎಲ್ಲರ ಅಂಬೇಡ್ಕರ್
ಅಭಿನಂದನೆಗಳು: ದಸಾಪ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಎಚ್ ಟಿ ಪೋತೆ ಅವರನ್ನು ಹಿರಿಯ ಸಾಹಿತಿ, ವಿಚಾರವಾದಿ ಡಾ. ವೆಂಕಟಯ್ಯ ಅಪ್ಪಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ. ಮಂಜುನಾಥ್, ಪತ್ರಕರ್ತ ಹಗರಿಬೊಮ್ಮನಹಳ್ಳಿಯ ಸಿ. ಶಿವಾನಂದ, ಹೊಸಪೇಟೆಯ ಇಂ. ಪ್ರಕಾಶ್ ಟಂಗೂರಿ, ಕರ್ನಾಟಕ ಜಾನಪದ ಪರಿಷತ್ತು ಬಳ್ಳಾರಿ ಜಿಲ್ಲಾ ಖಜಾಂಚಿ ಬಿ. ಸುರೇಶ್ ಕುಮಾರ್ ಮತ್ತಿತರರು ಅಭಿನಂದಿಸಿದ್ದಾರೆ.
*****