ಇಳೆ ಮಳೆ
ಇಳೆಗೂ ಮಳೆಗೂ
ಪ್ರೇಮ ಸರಸ ಸಲ್ಲಾಪ
ಮಳೆಗೂ ಬೆಳೆಗೂ
ಅಂಟಿದ ನಂಟು
ರಾಸಲೀಲೆಯಾಡುತ್ತಿವೆ
ಪ್ರಿಯೆ ಪ್ರಿಯಕರ
ಶಕ್ತಿ ಸಂಚಯನ, ಶಕ್ತಿ ಸಂಚಲನ
ಇಳೆಯು ವರ್ಷಾಳತ್ತ ಕೈ ಚಾಚಿದೆ
ಮಳೆಯು ಇಳೆಯತ್ತ ಮೈಚಾಚಿದೆ.
ತಬ್ಬಿಕೊಂಡಿವೆ
ಅಪ್ಪಿ ಹಿಡಿದಿವೆ.
ಬೆವರುತ್ತಿದ್ದಾರೆ ಈರ್ವರೂ
ಸಂಭೋಗ ಸಾಂಗತ್ಯ ತುರೀಯಾವಸ್ಥೆ
ಮೋಕ್ಷ ಸಮಷ್ಟಿ ಹಸಿರು ಹೊದ್ದು ಇಳೆಯು
ಈ ರತಿಕ್ರೀಡೆ ಫಲ ಉಣ್ಣುವ ಸಕಲ ಜೀವಿಗಳು
ಮಳೆಯೆ! ನಾವು ಕಂಬಳಿ ಹೊದ್ದು
ಒಲೆಯೆದುರಿಗೆ ಕುಳಿತು ಹಲಸಿನ ಬೇಳೆಯ
ಬೇಯಿಸಿ ಮೆಲ್ಲುತ್ತ ನೋಡುತ್ತಿದ್ದೇವೆ ಈ
ವಿಶ್ವರಂಗಸ್ಥಳದ ನಾಟಕವನು
ನೋಡಿ ನಾವೂ ಆಡುತ್ತೇವೆ ಅದೆ ನಾಟಕವನು
ನಾಚರೆ ಬೆಹನಾ ನಾಚರೆ!
ಮಳೆಯೆ! ತೊಳೆ ಶತಶತಮಾನದ ದುರ್ಗಂಧ
ಕಾಲುವೆಯ ಕೆಸರನ್ನು, ಶುದ್ಧೀಕರಿಸಿ ಪವಿತ್ರ
ನೀರ ಸೇಂಚನ ನಮ್ಮ ಜನ್ಮ ಪಾವನ.
-ಉದಯಕುಮಾರ ಹಬ್ಬು, ಕಿನ್ನಿಗೋಳಿ
*****