ಜನಪರ ಕಾಳಜಿಯೊಂದಿಗೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಪತ್ರಕರ್ತರಿಗೆ ಜನ‌ಮನ್ನಣೆ -ಹಿರಿಯ ಪತ್ರಕರ್ತ ಕಂ ಕ‌ ಮೂರ್ತಿ

ಬಳ್ಳಾರಿ, ಜೂ.28: ಯಶಸ್ವಿ ಪತ್ರಕರ್ತನಾಗಲು ಸರಳ ವ್ಯಕ್ತಿತ್ವ ಮತ್ತು ಸತತ ಅಧ್ಯಯನ ಶೀಲತೆ ಅತ್ಯಗತ್ಯ ಎಂದು ಹಿರಿಯ ಪತ್ರಕರ್ತ ಕಂ.‌ಕ ಮೂರ್ತಿ ಅವರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮ‌ ಕಾರ್ಯಾಗಾರದಲ್ಲಿ ಪಾಲ್ಗೊಂಡು‌ ಅವರು ವಿಶೇಷ ಉಪನ್ಯಾಸ ನೀಡಿದರು.
ಹೆಚ್ಚೆಚ್ಚು ಪುಸ್ತಕಗಳನ್ನು ಓದುವದರಿಂದ ಭಾಷಾ, ಪದ ಸಂಪತ್ತು ಹೆಚ್ಚುತ್ತದೆ. ಪರಿಶ್ರಮದ ಜತೆ ವಿನಯವನ್ನು ಬೆಳೆಸಿ ಕೊಳ್ಳಬೇಕು ಎಂದು ಯುವ ಪತ್ರಕರ್ತರಿಗೆ ಸಲಹೆ ನೀಡಿದರು.
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಜತೆಗೆ ತಾರತಮ್ಯರಹಿತ, ಜನಪರ ಕಾಳಜಿ ಹೊಂದಿರುವ ಪತ್ರಕರ್ತರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಲಭಿಸುತ್ತದೆ ಎಂದು ತಿಳಿಸಿದರು.


ಬೆಂಗಳೂರಿನ ಆಲ್ಮಾ‌ಮೀಡಿಯಾ ಸ್ಕೂಲ್ ಸಂಸ್ಥಾಪಕ, ಟಿವಿ ನಿರೂಪಕ ಗೌರೀಶ್ ಅಕ್ಕಿ ಮಾತನಾಡಿ, ಪತ್ರಕರ್ತರು ಡಿಜಿಟಲ್ ಕ್ರಾಂತಿಯ ಈ ಸಂದರ್ಭದಲ್ಲಿ ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಅಗತ್ಯವಿದೆ ಎಂದರು. ಕೌಶಲ್ಯಗಳನ್ನು ನವೀಕರಿಸಿಕೊಳ್ಳದಿದ್ದರೆ ನಮ್ಮ ಕ್ಷೇತ್ರಗಳಲ್ಲಿ ಹಿಂದೆ ಉಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನಸಾಮಾನ್ಯರು ಯಥೇಚ್ಚವಾಗಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ ಕೊಳ್ಳುತ್ತಿರುವಾಗ ಪತ್ರಕರ್ತರು ಬಳಸಲು ಹಿಂಜರಿಕೆ ಬೇಡ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ ಕುಟ್ಟಪ್ಪ ಅವರು, ವೃತ್ತಿಯಲ್ಲಿ ನೈಪುಣ್ಯತೆ ಗಳಿಸಿಕೊಳ್ಳಲು ಮಾದ್ಯಮ ಕಾರ್ಯಾಗಾರಗಳು ನೆರವಾಗುತ್ತವೆ. ಸ್ವಾರ್ಥಕ್ಕಾಗಿ ಸಂಘಟನೆಗಳನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಪತ್ರಕರ್ತರ ಒಳಿತಿಗೆ ಸಂಘಟಿತರಾಗುವ ಅವಶ್ಯಕತೆ ಇದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಪಾವಿತ್ರ್ಯ ಮತ್ತು ನೈತಿಕತೆ ಉಳಿಸಿಕೊಂಡರೆ ಸಮಾಜ ಹಾಗೂ ಜನರ ಪ್ರೀತಿ ಗಳಿಸಲು ಸಾಧ್ಯ ಎಂದರು.
ಪತ್ರಿಕಾಗೋಷ್ಠಿಗಳಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಎತ್ತರಿಸಿದ ದನಿಯಲ್ಲಿ ಪ್ರಶ್ನೆ ಕೇಳುವುದು ಸರಿಯಲ್ಲ. ನಯ ವಿನಯದ ವರ್ತನೆ ಅತ್ಯಗತ್ಯ ಎಂದು ಸಲಹೆ ನೀಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಪಿ ಎಸ್ ಮಂಜುನಾಥ್ ಅವರು, ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಹಿರಿದು ಎಂದು ತಿಳಿಸಿದರು.
ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಕೆಗೆ ಇಂತಹ ಮಾಧ್ಯಮ ಕಾರ್ಯಾಗಾರ ಅಗತ್ಯ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ. ಎಚ್ ಎಲ್ ಜನಾರ್ದನ, ಜಿಲ್ಲಾ ಘಟಕದ ಅಧ್ಯಕ್ಷ ವಲಿಭಾಷ, ರಾಜ್ಯ ಸಮಿತಿ ಸದಸ್ಯ ಎನ್. ವೀರಭದ್ರಗೌಡ ಮತ್ತಿತರರು ಉಪಸ್ಥಿತರಿದ್ದರು.
ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಎಪ್ಪತ್ತಕ್ಕೂ ಹೆಚ್ಚು ಪತ್ರಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
*****