ನಿನ್ನೆ ಜು. 1 ರಂದು ಶನಿವಾರ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಜನತಾವೈದ್ಯ ಡಾ.ಕೆ.ನಾಗರಾಜ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ‘ಶರಣರ ಮಹಿಮೆಯನ್ನು ಮರಣದಲ್ಲಿ ನೋಡು’ ಎಂಬ ಮಾತು ಅಲ್ಲಿ ಜೀವತಳೆದಂತಿತ್ತು.
ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರ ಬದುಕಿನಲ್ಲೂ ಡಾ.ನಾಗರಾಜ ಅವರ ಒಳ್ಳೆಯತನ ಪ್ರವೇಶಿಸಿದ ರೀತಿ, ಪ್ರಭಾವಿಸಿದ ಬಗೆಗಳು ಕೇಳುಗರನ್ನು ಭಾವುಕರನ್ನಾಗಿಸಿದವು.
ಅದೇ ಊರಿನವರಾದ ಹಿರಿಯ ವಕೀಲ (ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು) ಕಾಂತರಾಜು ಅವರು ತೆರೆದಿಟ್ಟ ವೈದ್ಯರೊಂದಿಗಿನ ತಮ್ಮ ಒಡನಾಟದ ನಿರೂಪಣೆಯಲ್ಲಿಯಂತೂ ಡಾ.ನಾಗರಾಜರ ವ್ಯಕ್ತಿತ್ವ, ಕಾಯಕತತ್ವ ಇಡೀಯಾಗಿ ಅನಾವರಣಗೊಂಡಿತು.
ವಚನ ಚಳವಳಿ ಕಾಲದಲ್ಲಿ ‘ಗುಪ್ತಭಕ್ತ’ರ ಪ್ರಸ್ತಾಪ ಬರುತ್ತದೆ. ಡಾ.ನಾಗರಾಜ ಅವರು ಒಂದರ್ಥದಲ್ಲಿ ‘ಗುಪ್ತ ಕಾಯಕ’ ಜೀವಿಯಾಗಿದ್ದರು. ಏಕೆಂದರೆ ಬದುಕಿನುದ್ದಕ್ಕೂ ಎಲ್ಲರನ್ನೂ ಹತ್ತಿರ ಸೆಳೆದು ಪ್ರೀತಿಯಲ್ಲಿ ತೋಯಿಸಿದ ಈ ಅಪರೂಪದ ವೈದ್ಯರು ಪ್ರಚಾರವನ್ನು ಮಾತ್ರ ಸುರಕ್ಷಿತ ದೂರದಲ್ಲೇ ಇರಿಸಿದರು ಹಾಗೂ ಇದು ಅವರ ಪ್ರಜ್ಞಾಪೂರ್ವಕ ನಡೆಯಾಗಿತ್ತು ಎಂಬುದು ಬಹಳ ಮುಖ್ಯ.
ಜು.1ರಂದು ಪತ್ರಿಕಾ ದಿನ ಹಾಗೂ ವೈದ್ಯರ ದಿನ ಎರಡನ್ನೂ ‘ಆಚರಿಸ’ಲಾಯಿತು. ದುರಂತದ ಸಂಗತಿಯೆಂದರೆ ಸಮಾಜದ ಸ್ವಾಸ್ಥ್ಯ ಮತ್ತು ವ್ಯಕ್ತಿಗಳ ಸ್ವಾಸ್ಥ್ಯಕ್ಕೆ ಹೊಣೆಗಾರರಾಗಬೇಕಾದ ಪತ್ರಿಕಾರಂಗ ಮತ್ತು ವೈದ್ಯಕೀಯ ಕ್ಷೇತ್ರಗಳು ಅಧೋಗತಿಗೆ ಇಳಿದಿರುವುದು! ಇಂಥ ದಾರುಣ ಸಂದರ್ಭದಲ್ಲಿ ಸೇವಾಮನೋಭಾವದ ವೈದ್ಯರ ನಿರ್ಗಮನ ನಿಜಅರ್ಥದಲ್ಲಿ ‘ತುಂಬಲಾಗದ ನಷ್ಟ’.
-ಚಂದ್ರಕಾಂತ ವಡ್ಡು, ಹಿರಿಯ ಪತ್ರಕರ್ತರು, ಬೆಂಗಳೂರು