ಅನುದಿನ ಕವನ-೯೧೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ:ಅವಳ ಖುಷಿ

ಅವಳ ಖುಷಿ

ಚಿತ್ತ ಅತ್ತಿತ್ತ ಹೋಗದಂತೆ ಮುತ್ತಿನ ಮೂಗುತಿ ಮಿನುಗುತ್ತಿತ್ತು ಮುಖದ ತುಂಬ ಖುಷಿ ತುಂಬಿ||
ಹಸಿರು ಬಳೆಗಳು ಹೊಸ ವಸಂತಕ್ಕೆ ಚಪ್ಪರ ಹಾಕಿ ಸೆಳೆಯುತಿತ್ತು ಮನದ ತುಂಬ ಖುಷಿ ತುಂಬಿ||

ಅವಳ ಅಂತರಂಗ ಅರಿಯದು ಎಂದು ಇಂದಿಗೂ ಲೋಕವೇ ಗೊಣಗುತ್ತಿರುವುದು|
ಎದೆಯ ಭಾರಕ್ಕೆ ಕೊರಳ ಹಾರ ಫಳ ಫಳ ಹೊಳೆಯುತ್ತಿತ್ತು ಕಣ್ಣುಗಳ ತುಂಬ ಖುಷಿ ತುಂಬಿ||

ಅವಳ ಅಂದಕ್ಕೆ ಎಂದೆಂದೂ ಮತ್ತೊಂದು ಮಗದೊಂದು ಸರಿಸಾಟಿಯಿಲ್ಲ|
ತೊಟ್ಟ ರವಿಕೆ ರೆಟ್ಟೆ ಬಿಗಿಯುತ ಒಂದಾಗಿ ತಬ್ಬಿಕೊಳ್ಳುತ್ತಿತ್ತು ಹೃದಯದ ತುಂಬ ಖುಷಿ ತುಂಬಿ||

ಅವಳ ಚೆಂದಕ್ಕೆ ಮಾರುಹೋದ ಹೂಗಳನ್ನು ಮೇಲಿನವನೇ ಮೀಸಲಿಟ್ಟಿರಬೇಕು|
ಮುಡಿದ ಮಲ್ಲಿಗೆ ಕನಕಾಂಬರಿ ನಗು ಚೆಲ್ಲಿ ಸುಗಂಧ ಸೂಸುತ್ತಿತ್ತು ಹೆರಳ ತುಂಬ ಖುಷಿ ತುಂಬಿ||

ಅವಳ ಶೃಂಗಾರ ಬೆರಗು ಮೂಡಿಸುವುದು ಕಪ್ಪನ್ನೂ ಒಪ್ಪಾಗಿಸುವ ರೀತಿ|
ತನ್ನ ಮೀರುವ ಅಂದ ಇಲ್ಲಿಲ್ಲ ಎಂದು ತೀಡಿದ ಕಣ್ಣ ಕಾಡಿಗೆ ಕಾಡುತ್ತಿತ್ತು ಕೆನ್ನೆ ತುಂಬ ಖುಷಿ ತುಂಬಿ||

ಅವಳ ನಿಟ್ಟುಸಿರು ಸುಮ್ಮನಿರಲು ಸಾಧ್ಯವಿಲ್ಲ ನೂರು ಕತೆ ನುಡಿವುದು|
ದಾರಿ ನೋಡುತ ಬರೀ ಮೌನವೇ ಮಾತಾಗಿ ತುಡಿಯುತ್ತಿತ್ತು ತುಟಿಯ ತುಂಬ ಖುಷಿ ತುಂಬಿ||

ಅವಳ ಅರಿಯಬೇಕು ‘ಗಟ್ಟಿಸುತ’ ಹೊನ್ನು ಮಣ್ಣು  ಮೀರಿದ ಅವಳು ಜಗದ ಕಣ್ಣು|
ನೆಟ್ಟ ನೋಟದಲ್ಲಿ ಭವಿಷ್ಯದ ಕನಸ್ಸುಗಳನ್ನು ಹುಡುಕುತ್ತಿತ್ತು ಬದುಕಿನ ತುಂಬ ಖುಷಿ ತುಂಬಿ||

-ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ
*****