ಅನುದಿನ ಕವನ-೯೧೯, ಕವಿ:ಎ.ಎನ್.ರಮೇಶ್. ಗುಬ್ಬಿ, ಕಾರವಾರ ಜಿ., ಕವನದ ಶೀರ್ಷಿಕೆ: ಸುದ್ದಿಮನೆಯ ಹನಿಗಳು

“ಜು.1 ರಂದು ಜರುಗಿದ ಪತ್ರಿಕಾ ದಿನಾಚರಣೆಯ ಹಿನ್ನಲೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರ ಪ್ರೀತಿಯ ಆಗ್ರಹಕ್ಕೆ ಮಣಿದು ಕವಿ ಎ.ಎನ್. ರಮೇಶ್ ಗುಬ್ಬಿ ಅವರು ರಚಿಸಿದ ಸುದ್ದಿಮನೆಯ ಹನಿಗಳಿವು. ಪತ್ರಿಕೋದ್ಯಮದ ಅಂತರಾಳದ ನಿತ್ಯ ಸತ್ಯ ಖನಿಗಳು. ಮಾಧ್ಯಮಗಳ ಕುರಿತಾದ ನಮ್ಮ-ನಿಮ್ಮೊಳಗಿನ ಮಾರ್ದನಿಗಳು. ಜನಸಾಮಾನ್ಯರನ್ನು ಭ್ರಮಾಲೋಕದಲ್ಲಿ ತೇಲಿಸದೆ, ಸತ್ಯಸುದ್ದಿಗಳ ಬೆಳಕು ಚೆಲ್ಲಿ, ವಾಸ್ತವಗಳ ಹಾದಿಯಲ್ಲಿ ನಡೆಸಬೇಕಾಗಿರುವುದು ಪ್ರತಿ ಪತ್ರಕರ್ತನ ಆದ್ಯ ಕರ್ತವ್ಯ. ಟಿ.ಆರ್.ಪಿ ಗಿಂತಲೂ ಸಮಾಜದ ಬಿ.ಪಿ. ಮತ್ತು ಸ್ವಾಸ್ಥ್ಯ ಮುಖ್ಯವಾಗಬೇಕು ಎಂಬುದು ಕವಿ ಎ.ಎನ್.ರಮೇಶ್. ಗುಬ್ಬಿ ಅವರ ಆಶಯವಾಗಿದೆ.

ಸುದ್ದಿಮನೆಯ ಹನಿಗಳು..

1. ಜೋಕೆ..!

ಸುದ್ದಿಯದು ಸದ್ದು
ಮಾಡಬೇಕೆ ವಿನಹ..
ಸದ್ದು ಮಾಡುವುದೆ
ಸುದ್ದಿಯಾಗಬಾರದು

2. ಜವಾಬ್ದಾರಿ.!

ಪತ್ರಿಕೆ, ಸುದ್ದಿ ಮಾಧ್ಯಮ ರಂಗ
ಪ್ರಜಾಪ್ರಭುತ್ವದ ನಾಲ್ಕನೆ ಅಂಗ
ಶುದ್ದ ಬದ್ದವಿರಬೇಕು ಅಂಗಾಂಗ
ಜೊತೆಗೆ ತತ್ವ ಸಿದ್ದಾಂತಗಳ ಸಂಗ.!

3. ಪತ್ರಕರ್ತ.!

ಪತ್ರಕರ್ತನೆಂದರೆ..
ಸತ್ಯ ಸಂಶೋಧಕ
ನ್ಯಾಯ ಪ್ರತಿಪಾದಕ
ದೌರ್ಜನ್ಯ ಪ್ರತಿರೋಧಕ
ಸಮಾಜದ ಸುಧಾರಕ
ಸರ್ವಜನ ಹಿತಚಿಂತಕ.!

4. ಔಚಿತ್ಯ..!

ಲೇಖನಿ ಖಡ್ಗಕ್ಕಿಂತ ಹರಿತ
ಬದ್ದತೆ ಪ್ರಬುದ್ಧತೆ ಕ್ಷಮತೆ
ಜಾಗ್ರತೆಗಳಿಂದ ಬಳಸಿದರಷ್ಟೆ
ಮಾಡಬಹುದು ಜನಕ್ಕೊಳಿತ.!
ನೀ ಹೆಸರಾಗಬಹುದು ತ್ವರಿತ
ನೆಲೆಯಾಗಿ ಜನಮನದಿ ಶಾಶ್ವತ.!

5. ಆದ್ಯತೆ.!

ಸುದ್ದಿಯ ರೋಚಕತೆಗಿಂತ
ಸತ್ಯಾಸತ್ಯತೆಗಿರಲಿ ಆದ್ಯತೆ
ಸುದ್ದಿ ವೈಭವೀಕರಣಕ್ಕಿಂತ
ವಾಸ್ತವತೆಗಿರಲಿ ಪ್ರಾಮುಖ್ಯತೆ.!

6. ಗುರಿ..!

ಜನಪ್ರಿಯ ಸುದ್ದಿಗಳಿಗಿಂತ
ಜನಪರ ಸುದ್ದಿಗೆ ಬೆನ್ನತ್ತು
ಗದ್ದುಗೆಗೆ ಆರತಿಯೆತ್ತುತ
ತುತ್ತೂರಿಯಾಗುವುದಕಿಂತ
ದಮನಿತರಿಗೆ ದನಿಯೆತ್ತು.!


-ಎ.ಎನ್.ರಮೇಶ್. ಗುಬ್ಬಿ, ಕಾರವಾರ ಜಿ.