ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸುವಂತೆ ಒತ್ತಾಯ.

ಬಳ್ಳಾರಿ, ಜು.11:ರಾಜ್ಯದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಬೇಕು‌ ಹಾಗೂ ಬಾಕಿ ಇರುವ ವೇತನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ  ಜಿಲ್ಲಾಧ್ಯಕ್ಷ ಡಾ. ಟಿ, ದುರುಗಪ್ಪ ಅವರು,  ರಾಜ್ಯದಲ ಸುಮಾರು 11 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಆದರೆ ಅತಿಥಿ ಉಪನ್ಯಾಸಕರ ಭವಿಷ್ಯವೇ ಅತಂತ್ರದ ಸ್ಥಿತಿಯಲ್ಲಿದೆ. ಅವರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ ಎಂದರು.                                                           ಪ್ರತಿ 10 ತಿಂಗಳಿಗೊಮ್ಮೆ ಆನ್‌ಲೈನ್‌ನಲ್ಲಿ ನವೀಕರಣ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಕಳೆದ 20 ವರ್ಷಗಳಿಂದ ಸರ್ಕಾರವು ಅತಿಥಿ ಉಪನ್ಯಾಸಕ ಎಂಬ ಪದವನ್ನು ಉಪಯೋಗಿಸಿ ವಿದ್ಯಾವಂತ ವರ್ಗವನ್ನು ದುಡಿಸಿಕೊಳ್ಳುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.                              ಕಳೆದ 20 ವರ್ಷಗಳಲ್ಲಿ ಯಾವ ಸರ್ಕಾರಗಳು ಕೂಡ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಕಾರ್ಯಕ್ಕೆ‌ ಮುಂದಾಗಲಿಲ್ಲ. ಹಿಂದಿನ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರದಲ್ಲಿ ಉಗ್ರ ಹೋರಾಟದ ಪ್ರತಿಫಲದ ಭಾಗವಾಗಿ ಅತಿಥಿ ಉಪನ್ಯಾಸಕರ ಸೇವೆಯನ್ನು ಪೂರ್ಣಕಾಲಿಕವಾಗಿ ಮಾಡಿ, ವಿವಿಧ ಸ್ಲಾಬ್‌ಗಳಲ್ಲಿ ಗೌರವಧನವನ್ನು ನೀಡುತ್ತಿದೆ. ಕಾರ್ಯಭಾರ ಹೆಚ್ಚಾಗಿದೆ ಹೊರತು ಸೇವೆ ಖಾಯಂ ಆಗಿಲ್ಲ. ಕೆಲಸಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತಿಲ್ಲ. ತಾರತಮ್ಯದ ವೇತನ ದೊರೆಯುತ್ತಿದೆ ಎಂದು ದೂರಿದರು.

ಅತಿಥಿ ಉಪನ್ಯಾಸಕರಲ್ಲಿ ವಯೋಮಿತಿ ಮೀರುತ್ತಿದೆ. ಅವರಿಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು, ಮಕ್ಕಳ ಮದುವೆ, ಮಕ್ಕಳಿಗೆ ಶಿಕ್ಷಣ ನೀಡುವುದು, ವಯೋವೃದ್ಧ ತಂದೆ ತಾಯಿಗಳ ಆರೋಗ್ಯ ಸಮಸ್ಯೆಗಳಿಗೆ ಗೌರವಧನ ಸಾಕಾಗುತ್ತಿಲ್ಲ ಎಂದು ಡಾ.ದುರುಗಪ್ಪ ನೋವನ್ನು ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡಲು ಪರಿಶೀಲಿಸಲಾಗುವುದು, ಚರ್ಚಿಸಲಾಗುವುದು, ಚಿಂತನೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಹೇಳುತ್ತಾ, ತುಟಿಗೆ ತುಪ್ಪ ಸವರುತ್ತಲೇ ತಮ್ಮ ಕಾಲಾವಧಿಯನ್ನು ಪೂರೈಸಿರುತ್ತಾರೆ. ಆದರೆ ಅತಿಥಿ ಉಪನ್ಯಾಸಕರು ಮಾತ್ರ ಪ್ರತಿ ನಿತ್ಯ ಹಲವು ಸಮಸ್ಯೆಗಳಿಂದ ನರಳುತ್ತಲೇ ಇದ್ದಾರೆ ಎಂದರು

11 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಬದುಕು ಡೋಲಾಯಮಾನವಾಗಿದೆ. ಈ ಹಿಂದೆ ಅರೆಕಾಲಿಕ ಉಪನ್ಯಾಸಕರನ್ನು ಖಾಯಂಗೊಳಿಸಿದಂತೆ ನಮ್ಮನ್ನೂ ಸಹ ಸರ್ಕಾರ ಖಾಯಂಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಈಗಾಗಲೇ ನಾವು ಮಾಡಿರುವ ಸೇವೆಯಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ.ಗಳ ಹಣ ಉಳಿತಾಯವಾಗಿದೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬಾಕಿ ಇರುವ ವೇತನ ಬಿಡುಗಡೆ ಮಾಡುವಂತೆ ಡಾ. ದುರುಗಪ್ಪ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಜೋಳದರಾಶಿ ಹನುಮೇಶ, ಎಸ್ ಎಂ ರಮೇಶ್, ಸಿದ್ದೇಶ್, ಮಾರೆಪ್ಪ, ಗಿರೀಶ್ ಕುಮಾರ್ ಗೌಡ,  ಗುರುರಾಜ್  ಮತ್ತಿತರರು ಇದ್ದರು.