ಅನುದಿನ‌ ಕವನ-೯೨೨, ಕವಿಯಿತ್ರಿ: ಡಾ.ನಾಗರತ್ನ ಅಶೋಕ‌ ಬಾವಿಕಟ್ಟೆ, ಹುನಗುಂದ, ಕವನದ ಶೀರ್ಷಿಕೆ: ಕೊನೆಯೆಲ್ಲಿದೆ

ಕೊನೆಯೆಲ್ಲಿದೆ

ಒತ್ತಿ ಹಿಡಿದು ಬಿಕ್ಕಳಿಸುತಿಹ
ಜಾತಿ ಭೂತದ ನೋವು ನರಳಾಟಕೆ
ಮುಕ್ತಿಯೆಲ್ಲಿದೆ

ಹಸಿದು ಮಾಂಸಕೆ ಗಸ್ತು ತಿರುಗುತಿಹ
ನರಹಂತಕರ ಹಪಾಹಪಿಗೆ
ತೃಪ್ತಿಯೆಲ್ಲಿದೆ

ಹರಿದು ಹಂಚಿ ಮೇಲೆರಗಿ ಕಾಡುವ
ಹೃದಯ ಹೀನರ ಕುಕೃತ್ಯಕೆ
ಶಿಕ್ಷೆಯೆಲ್ಲಿದೆ

ನೊಂದು ಬೆಂದು ಬಸವಳಿಯುತಿಹ
ಅನ್ನದಾತನ ಬೆವರ ಹನಿಗೆ
ಬೆಲೆಯೆಲ್ಲಿದೆ

ದುಡಿಯದೆ ಉಣ್ಣುವ ದರಿದ್ರ ದೇಹದ
ದಂಡುಕೋರರ ಬದುಕಿಗೆ
ಅರ್ಥವೆಲ್ಲಿದೆ

ಮನೆತನದ ಮಾನ ಹಿರಿಯರ ಮರ್ಯಾದೆ
ಕತ್ತು ಹಿಸುಕುವ ಅಮಾನವೀಯತೆಗೆ
ಮನುಷತ್ವವೆಲ್ಲಿದೆ

ಜೀವಜಲ ಕೆರೆ ಭಾವಿ ಹಳ್ಳಗಳ ಸ್ಪರ್ಶದಿ
ಹಾಲಾಹಲವಾಗುವದೆಂಬ ಮೂಢ ಜನರ
ಅಂಧಕಾರಕೆ ಬೆಳಕೆಲ್ಲಿದೆ

ಕಕ್ಕಸಖಾನೆಯ ಬೊಕ್ಕಸ ತುಂಬಲು
ಚುನಾವಣೆ ಹೆಸರಿನ ಪಂಚವಾರ್ಷಿಕ ಯೋಜನೆಗೆ
ಕೊನೆಯೆಲ್ಲಿದೆ


-ಡಾ. ನಾಗರತ್ನ ಅಶೋಕ‌ ಭಾವಿಕಟ್ಟಿ, ಹುನಗುಂದ
*****