ಬಳ್ಳಾರಿ, ಜು. 12: ಪ್ರಸಿದ್ಧ ಗಾಯಕ ಪಂ. ವೆಂಕಟೇಶ ಕುಮಾರ್,ಪ್ರಗತಿಪರ ಕೃಷಿಕರಾದ ಕವಿತಾ ಮಿಶ್ರಾ ಹಾಗೂ ಸಮಾಜ ಸೇವಕ ಡಿ.ಹೀರೆಹಾಳ್ ಇಬ್ರಾಹೀಂ ಅವರಿಗೆ ಬಳ್ಳಾರಿ ವಿಎಸ್ ಕೆ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ ಎಂದು ವಿವಿ ಕುಲಪತಿ ಕುಲಪತಿ ಪ್ರೊ. .ಸಿದ್ದು ಪಿ.ಆಲಗೂರ್ ಅವರು ತಿಳಿಸಿದರು.
ಅವರು ಬುಧವಾರ ವಿವಿಯ ಡಾ. ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಗಡಿನಾಡ ಗ್ರಾಮ ಲಕ್ಷ್ಮೀಪುರದ ಪಂ. ವೆಂಕಟೇಶ ಕುಮಾರ್ ಅವರ ಸಂಗೀತ ಸೇವೆ
ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿನ ಅನುಪಮ ಸೇವೆ ಪರಿಗಣಿಸಿ ರಾಯಚೂರು ಜಿಲ್ಲೆಯ ಸಿರಿವಾರದ ಕವಿತಾ ಮಿಶ್ರಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ಕನ್ನಡ ನಾಡು ನುಡಿ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ದಿ. ಇಬ್ರಾಹಿಂ ಅವರಿಗೆ ಮರಣೋತ್ತರವಾಗಿ ಗೌರವ
ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಬಳ್ಳಾರಿ ವಿಶ್ವವಿದ್ಯಾಲಯದ ಆವರಣದ ಸಭಾಭವನದಲ್ಲಿ ಜು.13 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ 11ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವ ವಿಶ್ವ ವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಪಾಲ್ಗೊಳ್ಳಲಿದ್ದಾರೆ.
ಘಟಿಕೋತ್ಸವದ ಮುಖ್ಯಭಾಷಣವನ್ನು ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್‍ನ ಅಧ್ಯಕ್ಷರಾದ ಡಾ.ಜೆ.ಕೆ.ಬಜಾಜ್ ಅವರು ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ವಿವಿಧ ವಿಭಾಗಗಳ ಒಟ್ಟು 32 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 51 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 72 ಒಟ್ಟು 123 ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ.
3 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು: ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ರುಬಾನ್.ಎಲ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಹಜಿರಾಜಿ.ಎ ಹಾಗೂ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರದ ರುಷಬ್ ಕುಮಾರ್ ಮೆಹ್ತಾ ಇವರುಗಳು ಪಡೆದುಕೊಂಡಿದ್ದಾರೆ.
2 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು: ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಕನ್ನಡ ವಿಭಾಗದ ಮೋಹನ್‍ಕುಮಾರ್ ಆರ್.ಜಿ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸ್ವಾತಿ.ಎ, ಭೌತಶಾಸ್ತ್ರ ವಿಭಾಗದ ಕಾರ್ತಿಕ್ ರೆಡ್ಡಿ ಹೆಚ್.ಕೆ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಸಮಾಜಶಾಸ್ತ್ರದ ಸುಮಾ ಕಾಯಣ್ಣನವರ ಹಾಗೂ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಬಿಎಸ್‍ಸಿ ವಿಭಾಗದ ವಿಶಾಲಾಕ್ಷಿ ಇವರುಗಳು ಪಡೆದುಕೊಂಡಿದ್ದಾರೆ.
ಪರೀಕ್ಷಾ ಫಲಿತಾಂಶ:ವಿಶ್ವವಿದ್ಯಾಲಯದ ಸ್ನಾತಕ ಪದವಿಯಲ್ಲಿ ಒಟ್ಟು 12,423 ಸ್ನಾತಕ ಪದವಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಬರೆದು ತಮ್ಮ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 1,712ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಿ ಕುಲ ಸಚಿವ ಪ್ರೊ. ಎಸ್.ಸಿ ಪಾಟೀಲ್, ಮೌಲ್ಯಮಾಪನ ವಿಭಾಗದ ಪ್ರೊ. ರಮೇಶ್ ಓ.ಓಲೇಕಾರ್ ಉಪಸ್ಥಿತರಿದ್ದರು.
*****
.