ಅನುದಿನ ಕವನ-೯೨೩, ಕವಿ: ಡಾ. ಗವಿಸಿದ್ದಪ್ಪ ಪಾಟೀಲ್, ಕಲಬುರಗಿ, ಕವನದ ಶೀರ್ಷಿಕೆ:ಹೊನ್ಕಲ್  ಬಿಂಬ

ಹೊನ್ಕಲ್  ಬಿಂಬ

ಆತ್ಮಸಖಿಯ ಧ್ಯಾನದಲ್ಲಿ
ಪ್ರೇಮ ಸೆಲೆಯ ಹುಡುಕುತ್ತ
ಅಮರ ಪ್ರೀತಿಯ
ಸಮರ ಗೆದ್ದ ಸರದಾರ
ಗಜಲ್ ಲೋಕದ ದೈತ್ಯ ಪ್ರತಿಭೆ
ಪ್ರೇಮದ ಅಮಲಿನಲಿ
ಗೌರಿ ಶಂಕರ ಏರಿದವರು

ನಾಡಿನ ಕರುಣ ಕವಿ
ಸಂವೇದನಾಶೀಲ ಲೇಖಕ
ಸಮುದ್ರದ ನೀರನ್ನು ಕೊಡದಲ್ಲಿ ತುಂಬಿ
ಹೊನ್ನಮಹಲಿನಲ್ಲಿ ಸುತ್ತು ಹಾಕಿ
ಆಕಾಶಕ್ಕೂ ಹಲವು ಬಣ್ಣ ತುಂಬಿದವರು

ಮಧು ಮನಸುಗಳೊಡನೆ ಮಾತುಗಾರಿಕೆ
ಹಸನ್ಮುಖಿ ಭಾವದ ವಿನಯವಂತ
ಉತ್ಸಾಹಿ ಒಲವು ಚೆಲುವಿನಲ್ಲಿ
ಚಿಂತನೆಗೆ ಹಚ್ಚುವ ಸಾಹಿತಿ
ಎಲ್ಲಿದ್ದ ಇಲ್ಲಿ ತನಕ
ಎಲ್ಲಿಂದ ಬಂದ್ನಪ್ಪ ಅಂತ
ಬೆರಗಾಗಿಸುವವರಿವರು !

ವಿಭಿನ್ನ ಶೈಲಿಯ ಬರಹ ತುಡಿತ
ಮೂರು ದೇಶ ನೂರೊಂದು ಅನುಭವ
ಪ್ರವಾಸ ಕಥನದ ಕನ್ನಡಿಯಲ್ಲಿ
ಕಥಾಹಂದರ ಹೆಣೆದ ಕಥೆಗಾರ
ಸಾರಸ್ವತ ಲೋಕಕ್ಕೆಂದೆ ಮುಡಿಪಾಗಿಟ್ಟ ಅಪ್ರತಿಮ ಜೀವವಿವರು

ಅಕ್ಷರ ಲೋಕದಲ್ಲಿ ರಾರಾಜಿಸುವ
ವೇದಿಕೆ ಕಾರ್ಯಕ್ರಮ ಸಭೆ
ಸಮ್ಮೇಳನಗಳಲಿ ರಂಜಿಸುವ
ಕಲ್ಯಾಣ ನಾಡಿನ ಅಪ್ರತಿಮ ಬರಹಗಾರ ತುಂಬಿದ ಕೊಡ ತುಳುಕುವುದಿಲ್ಲವೆಂಬಂತೆ
ಹಿಡಿದ ಹಠ ಸಾಧಿಸದೆ ಬಿಟ್ಟವರಲ್ಲ
ಈ ಹೊನ್ನಸಿರಿ !!!


-ಡಾ. ಗವಿಸಿದ್ದಪ್ಪ ಪಾಟೀಲ್, ಕಲಬುರಗಿ
*****