ಅನುದಿನ ಕವನ-೯೨೪, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ (ನಭಾ), ಹುನಗುಂದ, ಕಾವ್ಯ ಪ್ರಕಾರ: ತನಗಗಳು

ಪ್ರವಾಸದ ತನಗಗಳು

ಪ್ರವಾಸದಿಂ ಸಿಗುವ
ಖುಷಿ ಅಪರಿಮಿತ
ಆ ಅನುಭವ ಸದಾ
ಜಿನುಗುವ ಅಮೃತ

ಸೃಷ್ಟಿಯ ಸೊಬಗನು
ಸವಿದಷ್ಟು ಹಸಿವೇ
ಆತುರತೆ ಹೆಚ್ಚಾಗಿ
ತುಡಿವುದು ಹುಸಿಯೆ

ಜೀವಮಾನದಲ್ಲೊಮ್ಮೆ
ಮಳೆಗಾಲದ  ಜೋಗ
ನೋಡಲೇಬೇಕೆಂದು ನೀ
ನಿಶ್ಚಯಿಸಿಕೋ ಬೇಗ

ತಿಳಿದಿರದ ಜಾಗ
ಕೌತುಕದ ಕಣಜ
ಗಳಿಸಿ ಮಾಡೋದೇನು?
ಸುತ್ತಿ ಬಾರೋ ಮನುಜ

ಸಾಂಸ್ಕೃತಿಕ ಚರಿತ್ರೆ
ವಿಸ್ಮಯದ ಗಾಢತೆ
ಭಾಷಾ ವೈವಿಧ್ಯತೆ
ಕಂಡುಪಡು ಧನ್ಯತೆ

ಆ ನೀರಿನ ನಡುವೆ
ತೇಲುವ ದೋಣಿಯಂತೆ
ಯಾರು ತಂದಿಟ್ಟರೋ
ಈ ಸ್ವರ್ಗದ ತುಣಕ

ಗೊತ್ತಿರುವುದು ಎಷ್ಟು
ಕಡಲಿನಾಳದ ಬಗ್ಗೆ
ಕಾಣಬೇಕೆನಿಸದೇ
ಬಿಸಿ ನೀರಿನ ಬುಗ್ಗೆ

ಬೆಟ್ಟವೇರಿದ ಹೆಮ್ಮೆ
ಇಳಿಜಾರಿನಚ್ಚರಿ
ಲಭ್ಯವಿಲ್ಲ ಹಣಕೆ
ಪ್ರವಾಸ ಮಾಡಿ ಅರಿ

ರಾಜಕೀಯ ವಿಶೇಷ
ಭೌಗೋಳಿಕ ವೈವಿಧ್ಯ
ವಿದೇಶ ಸುತ್ತಿದರೆ
ಮಾತ್ರ ಕಾಣಲು ಸಾಧ್ಯ

ನಿಶಬ್ದದ ಶಬ್ದಕೆ
ಹಕ್ಕಿಗಳುಲಿವವು
ವಿವಿಧಾಕರ್ಷಣೆಗೆ
ಜೋಡಿಗಳೊಲಿದವು

ಅಚ್ಚರಿಗೊಂಡೆ ನಿಜ
ಕಂಡು ಕಡಲಾರ್ಭಟ
ಸನ್ನೆ ಮಾಡಿರಬೇಕು
ಇಲ್ಲ ಬಹುಶಃ ಮಾಟ

-ನಿಂಗಮ್ಮ ಭಾವಿಕಟ್ಟಿ (ನಭಾ), ಹುನಗುಂದ.

[ದೋಣಿ ಚಿತ್ರ ಕೃಪೆ: ಯಜ್ಞ ಆಚಾರ್, ಮಂಗಳೂರು]
*****