ಅನುದಿನ ಕವನ-೯೨೬, ಕವಿ: ಮಂಜುನಾಥ್ ಗಂಡಿ, ಹಗರಿ ಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ಹೆಜ್ಜೆಗುರುತುಗಳು ಹಸಿಯಾಗೇ ಇವೆ

ಹೆಜ್ಜೆಗುರುತುಗಳು ಹಸಿಯಾಗೇ ಇವೆ

ನಮ್ಮನು ತುಳಿಯಲು
ಬಗ್ಗಿದ ಬೆನ್ನ ಮೇಲೆ ನೀವಿಟ್ಟ
ಹೆಜ್ಜೆಗುರುತುಗಳು ಹಸಿಯಾಗೇ ಇವೆ

ದುಡಿವ ಕೈಗಳ  ಮೇಲೆ
ಮತ್ತಷ್ಟು ದುಡಿಸಲು  ನೀವಿಟ್ಟ
ಹೆಜ್ಜೆ ಗುರುತುಗಳು ಹಸಿಯಾಗೇ ಇವೆ

ತುತ್ತು ಅನ್ನಕ್ಕಾಗಿ ಚಾಚಿದ
ಖಾಲಿ ತಟ್ಟೆಯಲಿ ನೀವಿಟ್ಟ
ಹೆಜ್ಜೆ ಗುರುತುಗಳು ಹಸಿಯಾಗೇ ಇವೆ.

ನಾಲ್ಕು ಅಕ್ಷರಗಳಿಗಾಗಿ
ತೆರೆದ ಪುಸ್ತಕದ ಪುಟಗಳಲಿ ನೀವಿಟ್ಟ
ಹೆಜ್ಜೆಗುರುತುಗಳು ಹಸಿಯಾಗೇ ಇವೆ.

ಸುರಿವ ಬಿಸಿಲ ಬೇಗೆಗೆ
ಚಾಟಾಗಲಿಟ್ಟ  ತಡಿಕೆ ಸೂರಿನಲಿ ನೀವಿಟ್ಟ
ಹೆಜ್ಜೆ ಗುರುತುಗಳು ಹಸಿಯಾಗೇ ಇವೆ. .

ನಿಮ್ಮ ತೆವಲುಗಳಿಗೆ ನಮ್ಮ ಹೆಣ್ಣುಗಳ
ಕನಸುಗಳ ಮೇಲೆ ನಿವಿಟ್ಟ
ಹೆಜ್ಜೆ ಗುರುತುಗಳು ಹಸಿಯಾಗೇ ಇವೆ. .

ಬಣ್ಣದ ಕನಸ ಕಾಣಲು
ತೆರೆದ ಕಂಗಳಲಿ ನೀವಿಟ್ಟ
ಹೆಜ್ಜೆಗುರುತುಗಳು ಹಸಿಯಾಗೇ ಇವೆ. .

ಹಸಿಯಾದ ಹೆಜ್ಜೆಗುರುತುಗಳ
ಮಸಿಯಾದ  ಬಾಳಂಗಳವ
ತೊಳೆಯಲು ಹೇಳಬೇಕಿದೆ ಎದ್ದೇಳಬೇಕಿದೆ…


-ಮಂಜುನಾಥ್ ಗಂಡಿ, ಹಗರಿ ಬೊಮ್ಮನಹಳ್ಳಿ
*****