ಹುಬ್ಬಳ್ಳಿ, ಜು..20: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಮಾತ್ರ ನಡೆಸುತ್ತಿದ್ದ ಕೋರ್ಸುಗಳನ್ನು ರಾಜ್ಯವ್ಯಾಪಿ ನಡೆಸಲು ಸಂಸ್ಥೆಗಳಿಗೆ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.
ಗುರುವಾರ ನಗರದ ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮೂಜಗಂ ಸಭಾಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದೊಡನೆ ರಾಜ್ಯದ ಯಾವುದೇ ನೋಂದಾಯಿತ ಶಿಕ್ಷಣ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ, ನೃತ್ಯ ಮತ್ತು ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ನಡೆಸಲು ಅನುವಾಗುವ ಪರಿನಿಯಮಗಳಿಗೆ ರಾಜ್ಯಪಾಲರ ಅಂಕಿತ ದೊರಕಿದೆ. ಈಗಾಗಲೇ ರಾಜ್ಯದ ಏಳು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದೊಡನೆ ಒಡಂಬಡಿಕೆ ಮಾಡಿಕೊಂಡು ಕೋರ್ಸುಗಳನ್ನು ನಡೆಸುತ್ತಿವೆ ಎಂದು ತಿಳಿಸಿದರು. ಅಂತರಾಷ್ಟ್ರೀಯ ವೈಯಲಿನ್ ವಾದಕರು, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಲ್. ಸುಬ್ರಹ್ಮಣ್ಯಂ ಅವರು ತಮ್ಮ ಗ್ಲೋಬಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯಲ್ಲಿ ಸಂಗೀತ ಕೋರ್ಸ್, ನೃತ್ಯ ಕಲಾವಿದೆ ಡಾ. ಅನುರಾಧ ವಿಕ್ರಾಂತ್ ಅವರು ತಮ್ಮ ದೃಷ್ಟಿ ಆರ್ಟ್ ಸೆಂಟರ್ ನಲ್ಲಿ ನೃತ್ಯಕ್ಕೆ ಸಂಬಂಧಿಸಿದ ಕೋರ್ಸ್ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು ನಾಟಕದ ಕೋರ್ಸುಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಂಡಿರುತ್ತವೆ. ರಾಜ್ಯ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಯಾದ ಕರ್ನಾಟಕ ಜಾನಪದ ಪರಿಷತ್ತು ಕೂಡ ಜಾನಪದ ಕಲೆಗಳಲ್ಲಿ ಕೋರ್ಸುಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಇನ್ನೂ ಹತ್ತಾರು ಶಿಕ್ಷಣ ಸಂಸ್ಥೆಗಳು ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲು ಅರ್ಜಿಗಳನ್ನು ಸಲ್ಲಿಸಿವೆ. 2023-24ನೇ ಶೈಕ್ಷಣಿಕ ಸಾಲಿನಿಂದಲೇ ಈ ಸಂಸ್ಥೆಗಳಿಗೆ ಕೋರ್ಸ್ ನಡೆಸಲು ಅನುಮತಿ ನೀಡಲಾಗುತ್ತಿದೆ ಎಂದರು.
ಕರ್ನಾಟಕ ಸರ್ಕಾರವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುತ್ತಿದ್ದ ಸಂಗೀತ ಪರೀಕ್ಷೆ ಹಾಗೂ ಪ್ರದರ್ಶಕ ಕಲೆಗಳ ನೃತ್ಯ ಮತ್ತು ತಾಳ ವಾದ್ಯಗಳಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳನ್ನು ನಡೆಸುವ ಮತ್ತು ಪ್ರಮಾಣ ಪತ್ರಗಳನ್ನು ನೀಡುವ ಸಂಪೂರ್ಣ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಕ್ಕೆ ನೀಡಿದೆ. ಪಠ್ಯ ಕ್ರಮಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಆಧುನಿಕ ತಾಂತ್ರಿಕತೆಯನ್ನು ಸದ್ಬಳಕೆ ಮಾಡಿಕೊಂಡು ಪಾರದರ್ಶಕತೆಯಿಂದ ಪರೀಕ್ಷೆಗಳನ್ನು ವಿಶ್ವವಿದ್ಯಾಲಯದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ವಾಂಸರೊಡನೆ ಸಂವಾದ ನಡೆಸಿ ಪರೀಕ್ಷೆಗಳನ್ನು ನಡೆಸುವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗಿದೆ. ಜುಲೈ 30 ರೊಳಗೆ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಬಹುದು. ನವೆಂಬರ್ ನಂತರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿಶ್ವವಿದ್ಯಾಲಯದ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾಲಯ ಹಾಗೂ ಯುಜಿಸಿಯ ಪಠ್ಯಕ್ರಮದಂತೆ ಸಂಸ್ಥೆಗಳು ಬೋಧನೆ ಮಾಡಬೇಕು. ಕನಿಷ್ಠ 20 ಜನರು ಕೋರ್ಸ್ ಗಳಿಗೆ ದಾಖಲು ಮಾಡಿಕೊಳ್ಳಬಹುದು. ಸಂಗೀತ, ನೃತ್ಯ ವಿಷಯಗಳಲ್ಲಿ ಡಿಪ್ಲೋಮಾ ಪ್ರಮಾಣ ಪತ್ರ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ ಪದವಿಯ ಪ್ರವೇಶ ಶುಲ್ಕವನ್ನು ಈ ಕೋರ್ಸ್ ಗಳಿಗೆ ನಿಗದಿ ಪಡಿಸಲಾಗುವುದು. ಸಂಸ್ಥೆಗಳು ಪ್ರವೇಶ ಶುಲ್ಕದ ಶೇ. 25 ರಷ್ಟು ಹಣವನ್ನು ವಿಶ್ವವಿದ್ಯಾಲಯಕ್ಕೆ ಸಂದಾಯ ಮಾಡಬೇಕು. 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಹಾಗೂ 1 ವರ್ಷ ಅವಧಿಯ ಕೋರ್ಸುಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸರ್ಕಾರವು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ರೂ.1.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈಗಾಗಲೇ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣ ಬೋಧಕರಿದ್ದು, ಉಳಿದ ಸಿಬ್ಬಂದಿಗಳ ಖಾಯಂ ನೇಮಕಾತಿ ಕುರಿತು ಸರ್ಕಾರಕ್ಕೆ ತಿಳಿಸಲಾಗುವುದು ಎಂದು ತಿಳಿಸಿದರು.
ಪ್ರಾಚಾರ್ಯರಾದ ಡಾ.ಸಿಸಿಲೀಯಾ ಡಿಕ್ರೋಜ್, ಸಂಗೀತ ವಿದ್ವಾಂಸರಾದ ಶಿವಲೀಲಾ ಸಿದ್ಧವೀರಿ, ವಿಜಯಲಕ್ಷ್ಮಿ, ಅವರು ಸೇರಿದಂತೆ ಶಿರಸಿ, ಕುಮಟಾ, ಬೆಳಗಾವಿ, ಧಾರವಾಡ, ಹುಬ್ಬಳ್ಳಿಯ ಸಂಗೀತ ವಿದ್ವಾಂಸರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
*******