ಅನುದಿನ ಕವನ-೯೩೧, ಕವಿ: ಎ.ಎನ್.ರಮೇಶ್.ಗುಬ್ಬಿ, ಕಾರವಾರ ಜಿ. ಕವನದ ಶೀರ್ಷಿಕರ: ಟೊಮಾಟೊ ಹನಿಗಳು (ಹಾಸ್ಯ ಮಿನಿಗವಿತೆಗಳು)

” ಟೊಮಾಟೊ” ಎಂಬ ಸುಂದರಿಯ ಮೇಲೆ ಆರು ಹಾಸ್ಯದ ಹನಿ ಮಿನಿಗವಿತೆಗಳು ರಚಿಸಿದ್ದಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು.
ಗಗನ ಕುಸುಮವಾಗಿರುವ ಅಡುಗೆಮನೆ ಬಂಗಾರಿಯ ಮುಂದೆ ಹಚ್ಚಿಟ್ಟ ನಗೆಪ್ರಣತೆಗಳು. ಸ್ವಲ್ಪ ಉತ್ಪ್ರೇಕ್ಷೆಯಿದೆ, ವಿನೋದವಿದೆ, ವಿಡಂಬನೆಯಿದೆ, ಜೊತೆಜೊತೆಗೆ ಸ್ವಲ್ಪ ವಾಸ್ತವವೂ ಇದೆ. ಬಂಗಾರದ ಮಾಯಾಜಿಂಕೆಯಂತೆ ಓಡುತ್ತಿರುವ ಈ ಕೆಂಪು ಸುಂದರಿ ಎಲ್ಲರ ಕೈಗೆಟುಕುವಂತಾಗಲಿ. ಅಂಬರದ ತಾರೆಯಾಗದೆ, ಅಡುಗೆ ಮನೆಯಲ್ಲಿ ನಿತ್ಯಧಾರೆಯಾಗಿ ನೆಲೆಸುವಂತಾಗಲಿ ಎಂಬ ಆಶಯ ಕವಿಗಳದ್ದಾಗಿದೆ.

ಟೊಮಾಟೊ ಹನಿಗಳು..
1. ಕಾರಣ..!

ಮುರಿದು ಬಿತ್ತು
ಮದುವೆ ಬಾತುಚೀತು
ಕಾರಣ…………..
ಗಂಡಿನವರ ಡಿಮ್ಯಾಂಡು..
ಬೇಕೇಬೇಕೆಂದು ಕೇಳಿದರು
ಊಟಕ್ಕೆ ಟೊಮಾಟೊಬಾತು.!

2. ಒಪ್ಪಿಗೆ ರಹಸ್ಯ.!

ಕೇಳಿದಳು ಮೆಲ್ಲನೆ ವನಜ..
“ಏನಾಗಿದೆಯೇ ವಾರಿಜ ನಿನಗೆ.?
ಅವನ ಮುಖ ಸುಟ್ಟ ಬದನೆಕಾಯಿ
ದೇಹ ಥೇಟು ಒಣಗಿದ ನುಗ್ಗೆಕಾಯಿ
ವಿದ್ಯೆ ಬುದ್ದಿ ಎಲ್ಲವು ಕುಂಬಳಕಾಯಿ
ಆದರೂ ಒಪ್ಪಿದೆಯಲ್ಲ ಮದುವೆಗೆ.!”

ಕಣ್ಣರಳಿಸಿ ನುಡಿದಳು ವಾರಿಜ..
“ಹೇಗಿದ್ದರೇನಂತೆ ಅವನ ಮೂತಿ
ವಿದ್ಯೆಬುದ್ದಿ ಇಲ್ಲದಿರೆ ಏನಾಗತೈತಿ
ಇವೆಲ್ಲಕ್ಕಿಂತ ಮುಖ್ಯ ಅವನ ಬಳಿ
ಹತ್ತೆಕೆರೆ ಟೊಮಾಟೊ ಹೊಲ ಐತಿ.!”

3. ಸುದ್ದಿ-ಪದ್ದಿ

ಪತ್ನಿಪೀಡಿತ ಪದ್ದಣ್ಣ ಪತ್ರಿಕೆ ನೋಡಿ
ಸಂಭ್ರಮದಿ ಕಿರುಚಿ ಹೇಳಿದ..
“ಪದ್ದೀ ನೋಡಿದೆಯೇನೇ ಸುದ್ದಿ
ಟೊಮಾಟೊ ವಿಷಯಕ್ಕೆ ಮುನಿದು
ಜಗಳವಾಡುತ್ತ ಹೆಂಡತಿಯೊಬ್ಬಳು
ಹೋಗಿದ್ದಾಳೆ ಗಂಡನನ್ನೇ ತೊರೆದು.!”

ಪದ್ದಣ್ಣನ ತಲೆ ಮೇಲೆ ಮೊಟಕಿ
ಸಿಡುಕುತ್ತ ನುಡಿದಳು ಪದ್ದಿ..
“ಜಾಸ್ತಿ ಉಪಯೋಗಿಸಬೇಡಿ ಬುದ್ದಿ
ಗಂಡನ ಬಿಡುವಷ್ಟು ನಾನಲ್ಲ ಪೆದ್ದಿ
ನನಗಿಲ್ಲ ಟೊಮಾಟೊ ವಿಷಯಕ್ಕೆಲ್ಲ
ನಿಮಗೆ ಸ್ವಾತಂತ್ರ್ಯ ಕೊಡುವಂತ ಬುದ್ದಿ.!”

4. ಉಪಮೇಯ..!

ಮೊದಲೆಲ್ಲ ಪಕ್ಕದಮನೆಯವನು
ಅವನ ಹೆಂಡತಿಗೆ ಪ್ರೀತಿಯಿಂದ
“ಚಿನ್ನಾ, ರನ್ನಾ” ಎನ್ನುತ್ತಿದ್ದ ಸದಾ
ಈಗೊಂದು ಹತ್ತು ದಿನಗಳಿಂದ
“ಟೊಮಾಟೊ ಟೊಮಾಟೋ..”
ಎಂದು ಸಂಭೋದಿಸುತಿಹನು ನಿತ್ಯ.!

5. ಭದ್ರಕೋಟೆ..!

ಆ ಕಟ್ಟಡದ ಸುತ್ತಲು ಬಿಗಿಭದ್ರತೆ
ಸದಾ ಗನ್ನುಮ್ಯಾನುಗಳ ಪಹರೆ
ಸಿಸಿ ಟಿವಿಯ ಕಣ್ಗಾವಲಿನ ಕೈಸೆರೆ
ಸನ್ನದ್ದ ತುರ್ತುಗಂಟೆಯ ಕರೆ
ಇಷ್ಟೆಲ್ಲ ರಕ್ಷಣೆ ಸಿದ್ದತೆಗಳು ಏಕೆ.?
ಅಲ್ಲಿರುವುದಾದರೂ ಏನು? ಏನು?
……………………
ಅದು ಟೊಮಾಟೊ ಗೋಡಾನು..!!!

6. ಸಿರಿವಂತಿಕೆ..!

ಮೊನ್ನೆ ಸಂಬಂಧೀಕರ ಮದುವೆಗೆ
ಹೋಗಿಬಂದ ಪಕ್ಕದ್ಮನೆ ಪದ್ದಮ್ಮ
ಮುಂದಿನ ಮನೆ ಮೀನಮ್ಮನಿಗೆ
ಅಚ್ಚರಿಯಲಿ ಕಣ್ಣರಳಿಸಿ ಹೇಳುತ್ತಿದ್ದರು..
“ಅಬ್ಬಾ ಅದೇನು ಮದುವೆಯ ಸಿರಿ
ನಾ ಜೀವನದಲ್ಲೇ ನೋಡಿರಲಿಲ್ಲರಿ..
ಈ ದುಬಾರಿಯಲ್ಲು ಅದೆಂತ ಭರ್ಜರಿ
ಊಟಕ್ಕೆ ಟೊಮಾಟೊ ಬಾತು
ಟೊಮಾಟೊಪಲ್ಯ, ಟೊಮಾಟೊಚಟ್ನಿ
ಟೊಮಾಟೊ ರಸಂ ಸಾಂಬಾರು
ಕುಡಿಯಲು ಟೊಮಾಟೊ ಪಾನಕ
ಕಡೆಗೆ ಮದುವೆಗೆ ಬಂದವರೆಲ್ಲರಿಗೂ
ಒಂದು ಕೆಜಿ ಟೊಮಾಟೊ ತಾಂಬೂಲ!

7. ವಿಪರ್ಯಾಸ.!

ಇಳುವರಿ ಹೆಚ್ಚು ಬಂದಾಗಲೆಲ್ಲ
ಬೆಲೆ ಸಿಗದೆ ರೈತನಿಗೆ ಕಣ್ಣೀರು.!
ಫಸಲು ಕಡಿಮೆಯಾದಾಗಲೆಲ್ಲ
ಗ್ರಾಹಕರ ಪಾಲಿಗೆ ಕಣ್ಣೀರು.!
ಏನಾದರೂ ಈ ಕೆಂಪುಸುಂದರಿ
ಅಕ್ಷರಶಃ ಕಂಬನಿಯ ತವರು.!


-ಎ.ಎನ್.ರಮೇಶ್.ಗುಬ್ಬಿ, ಕಾರವಾರ ಜಿ.
—–