ಅನುದಿನ ಕವನ-೯೩೩, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಉಡುಗೊರೆ ಕೊಡಲೇನು

ಉಡುಗೊರೆ ಕೊಡಲೇನು

ಭುವಿಯ ಕ್ಷಿತಿಜದಿ ಬಿರಿದ
ಗಗನ ಕುಸುಮವು ನೀನು
ಅಘವಣಿಯ ತಂದು ಸಿಂಪಡಿಸಲೇನು

ಇಂದ್ರಛಾಪದಿ ಸೂಸುತಿರುವ
ಸಪ್ತವರ್ಣವು ನೀನು
ಕಪ್ಪು ಕಾಡಿಗೆ ದೃಷ್ಟಿ ತೆಗೆಯಲೇನು

ಕಡಲ ಸೇರಲು ಹರಿವ
ನದಿಯ ಅವಸರ ನೀನು
ಹರಿಗೋಲು ಹಿಡಿದು ಸರಿಸಲೇನು

ಮಕರಂದ ಹೀರಿ ಒಂದುಗೂಡಿಸುತ
ಸವಿಜೇನ ಸುರಿಸೊ ಬೃಂಗ ನೀನು
ಹೂರಾಶಿ ತೋಟ ಬೆಳೆಸಲೇನು

ಗೋಧೂಳಿ ಹರಡಿ ಹಾಡುವ
ಸವಿನೆನಪ ಕನಸು ನೀನು
ಓಕುಳಿಯ ರಂಗು ಎರಚಲೇನು

ಒಲಿದ ನೋಟದಿ ಹೊಮ್ಮುತಿಹ
ಸಕಲ ಸೌಖ್ಯವು ನೀನು
ಸುರಲೋಕಕೆ ನಿನ್ನ ಕರೆಸಲೇನು

ಐದು ಮುತ್ತುಗಳಲ್ಲಿ ಮೆರೆವ
ಮುತ್ತೈದೆಯ ನೂಪುರವು ನೀನು
ಗೆಜ್ಜೆಯ ಸದ್ದು ತೋರಲೇನು

ನಗುಮೊಗದ ಮೂಗುತಿಯಲಿ ಹೊಳೆವ
ರತುನದಾ ಹರಳು ನೀನು
ರಜತಗಿರಿ ಉಡುಗೊರೆಯ ನೀಡಲೇನು


-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
*****