ಅನುದಿನ‌ ಕವನ-೯೩೬, ಕವಿ: ಮಂಜು ಎಂ ದೊಡ್ಡಮನಿ, ಬೆಂಗಳೂರು 

ಹೊಕ್ಕುಳದ ಬುನಾದಿ ಮೇಲೊಂದು
ಬಳ್ಳಿಯ ಬೆಳೆಸಿ
ಒಲವ ಸುಗಂಧ ಸೂಸುವ
ಹೂಗಳ ಅರಳಿಸುವೆ
ಕತ್ತಲ ಬಯಕೆಗಳಿಗೊಂದಿಷ್ಟು
ಬೆವರು ಹರಿಸು.
ಕಾಮ ತೃಷೆ ಎಲ್ಲೇ ಮೀರಲಿ;
ಕಡು ಸಂಜೆ ಕೆಂಪಾಗಿ
ಮೆಲ್ಲಗೆ ಕಪ್ಪಾಗುವಾಗ
ನಗ್ನತೆಯ ಕುಂಚ ಭಾವಭಂಗಿಯ
ಚಿತ್ರ ಬಿಡಿಸಲಿ..

ಅದೆಷ್ಟು ಕಣ್ಣುಗಳು ರೆಕ್ಕೆ ಬಿಚ್ಚಿ
ಕುಣಿವ ನವಿಲಿಗೆ, ಅದರ ದುಪ್ಪಟ್ಟು
ನನ್ನೊಳ ಪ್ರೇಮ ಯಾತ್ರಿಕನಿಗೆ,
ಇದು ಕ್ಷಣಿಕದ ಮಾತಲ್ಲ
ಮತ್ತಿನಲಿ ಮೋಹದಲಿ ಮುದದಲಿ
ನುಡಿದ ಪಕ್ವತೆಯ ಮಾತು,
ಸುಖ ಕ್ಷೇತ್ರದ ಯಾತ್ರಾರ್ಥಿ ನಾನು
ಪರಿಚಿತ ಸ್ಥಳವು ಕೆಲವೊಮ್ಮೆ ಅಜ್ಞಾತ
ನೀನು ಮಾರ್ಗದರ್ಶಿಯಾಗು
ನೀನೆಂಬ ಸ್ಪರ್ಶವೇ ನನಗಿಲ್ಲಿ ಕೈಪಿಡಿ…

ಪೋಣಿಸದೆ ಆದ ಒಲವ ಹಾರಕ್ಕಿಲ್ಲಿ
ವಾಂಛೆಗಳು ನೂರು
ಸೇರುವ ಕೊರಳು ನಿನ್ನದೋ ನನ್ನದೋ…
ಅಕ್ಷಿಪಟಲದ ತುದಿಯಲ್ಲಿ ಈಜುವ
ಮೋಹಕ್ಕೆ ಮೋಕ್ಷ ಕೊಡುವ ಸಮಯ
ಎಷ್ಟು ಸಲ ಸತ್ತು ಹುಟ್ಟಿದರು
ಮತ್ತದೇ ಮೊದ ಮೊದಲ ತುಮುಲ,
ಅಷ್ಟರಲ್ಲೇ
ಹೊಕ್ಕುಳದ ಬಳ್ಳಿ ಹೂವಾಗಿವೆ
ಇದು ವಿರಾಮಕ್ಕೆ ಹಿಡಿದ ಕನ್ನಡಿ. ..

– ಮಂಜು ಎಂ ದೊಡ್ಡಮನಿ, ಬೆಂಗಳೂರು
—–