ಅನುದಿನ ಕವನ-೯೪೦, ಕವಿ: ಟಿಪಿ ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ಬಾ….ಮಾತನಾಡೋಣ

ಬಾ… ಮಾತನಾಡೋಣ

ಬಾ… ಮಾತನಾಡೋಣ
ಕವಿತೆಗಳ ಮೂಲಕವೇ ಎಷ್ಟಂತ ಹೇಳುವುದು
ಮೃದು ಮಧುರ ಪ್ರೀತಿಯನು?
ಎದುರಾಗಿ ಕುಳಿತಾಡುವ ಮಾತುಗಳ ಫಲುಕು;
ಮಿಗಿಲಲ್ಲ ಬಿಡು, ಈ ಎಲ್ಲ ಕವಿತೆಗಳ ಝಲಕು!

ಮಾತನಾಡೋಣ…
ಲಗುಬಗೆಯಿಂದ, ಸವಿ ನಗೆಯಿಂದ, ಹುಸಿ ಮುನಿಸಿಂದ, ಹಸಿ ಆಸೆಯಿಂದ;
ಕವಿತೆಯ…
ಕಟ್ಟು ಮೈಕಟ್ಟು ಚೌಕಟ್ಟುಗಳಿಲ್ಲದೆ;
ವ್ಯಾಕರಣ ಲಯ ಛಂದ ಬಂಧಗಳಿಲ್ಲದೆ;
ಪಲ್ಲವಿ ಚರಣ ದ್ವನಿ ಅಂತ್ಯಗಳಿಲ್ಲದೆ;
ಸಮಯ ಸ್ಥಳ ಕವಿತ್ವದ ಭಾರಗಳಿಲ್ಲದೆ.

ಕವಿತೆಗಂತು ಬರಬಹುದು ಬರ;
ಮಾತಿಗೇಕೆ ಅಲಂಕಾರದ ವರ?
ಬಾ…
ಮಾತನಾಡೋಣ
ಎಳೆಗಾಳಿ ಕುಳಿಗಾಳಿ ಉರಿಗಾಳಿ ಬಿರುಗಾಳಿ ಸುಳಿಗಾಳಿಯಂತೆ
ಮೋಡ ಕಟ್ಟಿ ಕುಟ್ಟಿ ಮಳೆಗರೆಯುವಂತೆ;
ಭೂಮಿ ಚಿಗುರೊಡೆದು ಉಬ್ಬಿ ತಬ್ಬಿ ಹಬ್ಬುವಂತೆ!

ನಮ್ಮ ಬದುಕು ಬಣ್ಣ;
ಬರಿ ಕವಿತೆಯಿಂದಾಗದು;
ಕೂತಾಡುವ ಮಾತಿನ ಧಾಟಿಯಿಂದಾಗುವುದು!
ಬಾ… ಮಾತನಾಡೋಣ…


-ಟಿಪಿ.ಉಮೇಶ್
ಚಿತ್ರದುರ್ಗ
*****