ಕಾರಿರುಳ ರಾತ್ರಿಗಳು…
ಅಡಿಯಿಂದ ಮುಡಿಯವರೆಗೆ
ಸಿಂಗರಿಸಿದ ಹೆಣ ನಾನು
ಜೀವವಿರುವ ಕುರುಹಿಗೆ
ಆಗಾಗ ನಿಟ್ಟುಸಿರೊಂದಿಗೆ
ಹೊರದೂಡುವ ಉಸಿರೊಂದಿದೆ…
ರಂಗು ರಂಗಿನ ಹಾಸಿಗೆಯಲ್ಲಿ
ರಂಗೇರಿದ್ದ ಕನಸುಗಳ ಸಾವು,
ಪ್ರತಿದಿನದ ಪ್ರತಿಕ್ಷಣವೂ ನನ್ನ
ದಿಟ್ಟಿಸುವ ಕಣ್ಣುಗಳಿಗೆ ನಾ ಅಪ್ಸರೆ
ಶಾಪಗ್ರಸ್ತ ದೇಹ,ಸದಾ ಮಸಣವ
ಅಲಂಕರಿಸುವ ಹೂವಿನಂತೆ
ಅರಳುತ್ತಲೇ,, ಅಸುನೀಗುತ್ತದೇ
ಹಣೆಯ ಮೇಲಿದ್ದ ಕುಂಕುಮ
ಬಹಳಷ್ಟು ಬಾರಿ ನಗುವುದೆ ಇಲ್ಲ
ಮೃದು ಬೆರಳ ತುದಿಯೆಲ್ಲ
ಕಂಪಿಸಿ ತತ್ತರಿಸಿ ಬಾಡುತ್ತವೆ
ಎದೆಯ ಭಾವಗಳು ಅಳುತ್ತವೆ
ಇವೆಲ್ಲಾ ನೋಡಿದ ಗೋಡೆಗಳು
ಕಿರುಗುಟ್ಟುವ ಮಂಚ
ಒದ್ದೆಯಾದ ತಲೆದಿಂಬು
ನಾ ಪ್ರತಿ ಬಾರಿ ಹೆಣವಾದಗಳೆಲ್ಲಾ
ಕಣ್ತಪ್ಪಿಸಿ ನೋಡುತ್ತಲೇ ನಿಂತಿವೆ
ಒಳಗೊಳಗೇ ರೋಧಿಸುತ್ತೇನೆ ನಾ..
ಮತ್ತೆಂದೂ ಕಾಲ ಅಡಿಯಲ್ಲಿ
ನುಚ್ಚು ಗುಚ್ಚಾಗುವ
ಹೂವಾಗಬಾರದೆಂದು…
ಆದರೂ
ಪ್ರತಿ ಮೈಲಿಗೆಯ ನಂತರ
ಮಡಿಯಾಗುವ ನಾ ಸಾವಿರಾರು
ಬಾರಿ ಮಡಿಯುತ್ತೆನೆ…
ಅಡಿಯಿಂದ ಮುಡಿಯವರೆಗೆ
ಸಿಂಗರಿಸಿದ ಜೀವಂತ ಹೆಣ ನಾನು
ಜೀವವಿರುವ ಹೆಣ ನಾನು…!!
-ಪಾರ್ವತಿ ಸಪ್ನ, ಬೆಂಗಳೂರು
*****