ರಾಘವ ಪ್ರಶಸ್ತಿ:  ಹಿರಿಯ ಕಲಾವಿದರ ಕಡೆಗಣನೆ -ರಂಗಕರ್ಮಿ ಕೆ.ಜಗದೀಶ್ ಆರೋಪ

ಬಳ್ಳಾರಿ, ಆ.1 : ಕಳೆದ 14 ವರ್ಷಗಳಿಂದ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಆಡಳಿತ ನಡೆಸುವ ರಾಘವ ಮೆಮೋರಿಯಲ್ ಅಸೋಸಿಯೇಷನ್ ಸಂಸ್ಥೆಯು ‘ರಾಘವ ಪ್ರಶಸ್ತಿ’ನೀಡುತ್ತಿದ್ದು, ಹಿರಿಯ ಕಲಾವಿದರನ್ನು ಕಡೆಗೆಣಸಿ ಅರ್ಹತೆ ಇಲ್ಲದವರಿಗೆ ಪ್ರಶಸ್ತಿ ನೀಡುತ್ತಿದ್ದಾರೆ ಎಂದು ಹಿರಿಯ ರಂಗಕರ್ಮಿ ಕೆ. ಜಗದೀಶ್ ಅವರು ಆರೋಪಿಸಿದರು.
ನಗರದ ಸ್ನೇಹ ಸಂಪುಟದ ಸಂಭಾಗಣದಲ್ಲಿ ಮಂಗಳವಾರ  ಅವರು ಸುದ್ದಿಗಾರರೊಂದಿಗೆ  ಮಾತನಾಡಿದರು.
ರಂಗಭೂಮಿಯಲ್ಲಿ ಸುದೀರ್ಘ ಹಾಗೂ ಗುಣಮಟ್ಟದ ಸೇವೆ ಸಲ್ಲಿಸಿದವರಿಗೆ ಗೌರವ ಸಲ್ಲಿಸುವ ಸದುದ್ದೇಶದಿಂದ ಆರಂಭಿಸಲ್ಪಟ್ಟ ರಾಘವ ಪ್ರಶಸ್ತಿ ಕಾಲಕ್ರಮೇಣ ಸ್ವಜನ ಪಕ್ಷಪಾತ ಹಾಗೂ ನಿಗೂಢ ನಡೆಗಳಿಂದ ಮೌಲ್ಯ ಕಳೆದು ಕೊಳ್ಳುವಂತಾಗಿರುವುದು ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಹೇಳಿದರು.
ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಹಿರಿಯ ಜೀವಗಳು ಇಂದಿನ ವಿದ್ಯಮಾನಗಳಿಗೆ ಬೇಸತ್ತು ನೊಂದುಕೊಂಡಿದ್ದಾರೆ ಎಂದರು.
ಸಂಸ್ಥೆ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ,
ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು  20 ವರ್ಷ ಅಭಿನಯ ಮಾಡಿರಬೇಕೆಂಬ ನಿಯಮವಿದೆ. ಆದರೆ ಆ ಕಲಾವಿದರು ರಂಗಭೂಮಿಯಲ್ಲಿ ನಿರಂತರ ಸಕ್ರಿಯರಾಗಿದ್ದಾರೋ ಅಥವಾ ಶಾಲೆಯಲ್ಲಿ ಓದುವಾಗ ಮಾತ್ರ ಒಂದು ನಾಟಕ ಮಾಡಿದ್ದರೋ ಎಂಬ ಬಗ್ಗೆ ಆಯ್ಕೆ ಸಮಿತಿ ಯೋಚಿಸುತ್ತಿಲ್ಲ ಎಂದು ದೂರಿದ ಅವರು,  ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸುತ್ತಾರೆ. ರಾಜ್ಯ ಹಾಗೂ ಬಳ್ಳಾರಿ ಜಿಲ್ಲೆಯ ಕಲಾವಿದರು ಅರ್ಜಿ ಸಲ್ಲಿಸಬೇಕೆಂಬ ನಿಯಮವಿದೆ. ಆದರೆ ಆಂಧ್ರಪ್ರದೇಶ ಅನಂತಪುರ ಕರ್ನೂಲು ಜಿಲ್ಲೆಗಳ ಕಲಾವಿದರಿಗೆ ರಾಘವ ಪ್ರಶಸ್ತಿ ಹೇಗೆ ನೀಡಿದರು ಎಂದು ಪ್ರಶ್ನಿಸಿದರು.  ಕನ್ನಡ ವಿಭಾಗದ ಜಿಲ್ಲಾ ಪ್ರಶಸ್ತಿ ಪಡೆಯಲು ಬಳ್ಳಾರಿ ಜಿಲ್ಲೆಯವರಿಗೆ ಮಾತ್ರ ಅವಕಾಶವಿದೆ. ತೆಲುಗು ವಿಭಾಗದಲ್ಲಿ ಹೊರ ರಾಜ್ಯದವರ ಅರ್ಜಿಗಳನ್ನು ಸಹ ಜಿಲ್ಲಾ ಪ್ರಶಸ್ತಿಗೆ ಪರಿಗಣಿಸಿದ್ದಾರೆ ಎಂದು ಆಕ್ಷೇಪಿಸಿದರು.
ಬಳ್ಳಾರಿ ನಗರ ಹೊರತುಪಡಿಸಿ ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿ ತೆಲುಗು ಕಲಾವಿದರು ಕಾಣುತ್ತಿಲ್ಲ. ಬಳ್ಳಾರಿ ನಗರದಲ್ಲಿ ಮಾತ್ರ ಇರುವ ತೆಲುಗು ಕಲಾವಿದರಿಗೆ ಎರಡು ಪ್ರಶಸ್ತಿ, ಆದರೆ 11 ತಾಲೂಕುಗಳಲ್ಲಿರುವ ಕನ್ನಡ ಕಲಾವಿದರಿಗೆ ಸಹ ಎರಡೇ ಪ್ರಶಸ್ತಿ ಎಂಬುದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಗೆಣಕಿಹಾಳ್ ತಿಮ್ಮನಗೌಡ, ಹೆಚ್ ಎಂ ಜಗದೀಶ್, ವೀರೇಶಯ್ಯ ಸ್ವಾಮಿ, ನಾಗರಾಜ್ ಗೌಡ ಮತ್ತಿತರರು ಇದ್ದರು.
—–