ಬಳ್ಳಾರಿ, ಆ.1: ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಧ್ಯಾಪಕಿ ಶೋಭದೇವಿ ಅವರು ಸೋಮವಾರ ವಯೋನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಗಣ್ಯರು, ಶಾಲೆಯ ಮುಖ್ಯಗುರು, ಶಿಕ್ಷಕಿಯರು, ಅಡುಗೆ ಕೆಲಸಗಾರರು, ವಿದ್ಯಾರ್ಥಿಗಳು ಹೃದಯ ಸ್ಪರ್ಶಿಯಾಗಿ ಬೀಳ್ಕೊಟ್ಟರು. ಇಂದಿರಾನಗರ ಡಾ. ಬಿ ಆರ್ ಅಂಬೇಡ್ಕರ್ ಸಹಿಪ್ರಾ ಶಾಲೆಯ ಆವರಣದಲ್ಲಿ ಸಂಜೆ ಜರುಗಿದ ಸರಳ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಜಿಲ್ಲಾ ಸಾಕ್ಷರತಾ ಆಂದೋಲನದ ನಿಕಟಪೂರ್ವ ಅಧಿಕಾರಿ ಜಿ.ಶಿವಶಂಕರ್ ಮತ್ತಿತರ ಗಣ್ಯರು ಪಾಲ್ಗೊಂಡು ಶೋಭದೇವಿ ಅವರಿಗೆ ಶುಭಕೋರಿದರು.
ಸಿ.ನಿಂಗಪ್ಪ ಅವರು ಮಾತನಾಡಿ, ಶೋಭದೇವಿ ಅವರು ಮೂವತ್ತು ವರ್ಷಗಳ ತಮ್ಮ ಕರ್ತವ್ಯ ಅವಧಿಯಲ್ಲಿ ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸರಕಾರದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಸೇರಿದಂತೆ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿರುವುದೇ ಇವರ ಕರ್ತವ್ಯ ದಕ್ಷತೆಗೆ ಸಾಕ್ಷಿ ಎಂದು ಶ್ಲಾಘಿಸಿದರು.
ಶಾಲೆಗೆ ವರ್ಗಾವಣೆಯಾಗಿ ಬರುವ ಶಿಕ್ಷಕರನ್ನು ಆತ್ಮೀಯವಾಗಿ ಸ್ವಾಗತಿಸುವ, ವರ್ಗಾವಣೆಗೊಳ್ಳುವ ಹಾಗೂ ವಯೋ ನಿವೃತ್ತಿ ಹೊಂದುವ ಅಧ್ಯಾಪಕರನ್ನು
ಪ್ರೀತಿ, ಸಂಭ್ರಮದಿಂದ ಬೀಳ್ಕೊಡುವ ಪರಂಪರೆ ನಮ್ಮ ಶಿಕ್ಷಣ ಇಲಾಖೆಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿ.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಜೀವನ ನಡೆಸಿದರೆ ಪಾಠ ಕಲಿಸಿದ ಅಧ್ಯಾಪಕರು, ಉಪನ್ಯಾಸಕರು ಸಂತಸ, ಹೆಮ್ಮೆ ಪಡುತ್ತಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು
ತಮ್ಮ ಶಾಲೆಗೆ, ಊರುಗಳಿಗೆ, ಪಾಲಕರಿಗೆ, ಶಿಕ್ಷಕರಿಗೆ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶೋಭದೇವಿ ಅವರು ನನ್ನ ಶ್ರೀಮತಿ ಅವರೊಂದಿಗೆ ದಶಕಗಳ ಕಾಲ ಸಹೋದ್ಯೋಗಿಗಳಾಗಿ ಕಾರ್ಯ ನಿರ್ವಹಿಸಿದ್ದು, ಈ ಸಂದರ್ಭದಲ್ಲಿ ಅವರ ಪರೋಪಕಾರ, ಶಿಸ್ತು ಹಾಗೂ ಲವಲವಿಕೆಯಿಂದ ಕಾರ್ಯನಿರ್ವಹಿಸುತ್ತಾ ಮಕ್ಕಳ ಪ್ರಗತಿಗಾಗಿ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿದ್ದವಶೋಭದೇವಿ ಅವರ ಪತಿ ಲಕ್ಷ್ಮಣ ಅವರು ಮಾತನಾಡಿ, ತಮ್ಮ ತಂದೆ ನಿವೃತ್ತ ತಹಸೀಲ್ದಾರ್ ಅವರು ಸೊಸೆಗೆ ಹೇಳಿದ ಎಚ್ಚರಿಕೆ ಮಾತುಗಳನ್ನು ಸ್ಮರಿಸಿ, ನನ್ನ ಸರಕಾರಿ ಕರ್ತವ್ಯ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇರುವುದಿಲ್ಲ. ಶಿಕ್ಷಣ ಇಲಾಖೆಯಲ್ಲಿ ನಿನ್ನ ಸೇವೆಯೂ ಮಾದರಿಯಾಗಿರಬೇಕು ಎಂದು ಹೇಳಿದಂತೆ ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿದರು ಎಂದು ತಿಳಿಸಿದರು.
ಎರಡು ದಶಕಗಳ ಹಿಂದೆ ಮೋಕದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸರಿಯಾದ ಸಮಯಕ್ಕೆ ಬಸ್ ಇರದಿದ್ದರಿಂದ ಲಾರಿ ಏರಿ ಹೋಗುತ್ತಿದ್ದು, ಒಮ್ಮೆ ಅಪಘಾತವಾಗಿ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿರಲಿಲ್ಲ ಎಂದು ಸ್ಮರಿಸಿ ಭಾವುಕರಾದರು.
ಮುಖ್ಯ ಗುರು ಕಣಮಕ್ಕ ಅವರು ಮಾತನಾಡಿ, ಶೋಭದೇವಿ ಅವರು ಶ್ರಮಜೀವಿ. ಶಿಸ್ತು, ಸಮಯಪಾಲನೆ ಇವರ ಮುಖ್ಯಗುಣಗಳೆಂದು ಗುಣಗಾನ ಮಾಡಿದರು.ಉತ್ತಮ ಶಿಕ್ಷಕಿಯೊಬ್ಬರು ವಯೋ ನಿವೃತ್ತಿ ಹೊಂದುತ್ತಿರುವುದು ದುಃಖದ ಸಂಗತಿ ಎಂದರು.
ಶೋಭದೇವಿ ಅವರು ಮಾತನಾಡಿ, ಸೇವಾವಧಿಯಲ್ಲಿ ತಮ್ಮ ಪತಿ ಅವರ ಸಹಕಾರ ಬೆಂಬಲ, ಸಹೋದ್ಯೋಗಿಗಳ ಸಹಾಯವನ್ನು ನೆನೆದರು. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಜೀವನದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಪುತ್ರ ಮುರಳಿಕೃಷ್ಣ. ಸೊಸೆ ಕೋಮಲ, ಅಧ್ಯಾಪಕಿಯರಾದ ಹೆಚ್. ಎಂ ಮಂಜುಳಾ, ಕಲ್ಪನಾ, ಅನುಪಮ, ರೇಣುಕಾ, ರಾಜೇಶ್ವರಿ, ಸುವರ್ಣ ಮತ್ತಿತರರು ಶೋಭದೇವಿ ಅವರ ಜತೆಗಿನ ಒಡನಾಟ ಹಂಚಿ ಕೊಂಡರು. ವಿದ್ಯಾರ್ಥಿಗಳು ಬೀಳ್ಳೊಡುಗೆ ನೆನಪಿಗಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಸಿ. ನಿಂಗಪ್ಪ, ಜಿ. ಶಿವಶಂಕರ್ ಅವರನ್ನು ಶಾಲಾ ಪರವಾಗಿ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕಿ ವಿರೂಪಾಕ್ಷಮ್ಮ, ಹಲಕುಂದಿ ಸಕಿಪ್ರಾ ಶಾಲೆಯ ಅಧ್ಯಾಪಕಿ ಮೀನಾಕ್ಷಿ ಕಾಳೆ, ಇಂದಿರಾನಗರ ಪ್ರೌಢಶಾಲೆಯ ಶಿಕ್ಷಕಿಯರು, ಎಸ್.ಡಿ.ಎಂ.ಸಿ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ಶಿಕ್ಷಕಿ ಹೆಚ್ ಎಂ ಮಂಜುಳಾ ಸ್ವಾಗತಿಸಿದರು. ಶಿಕ್ಷಕಿ ಲೀಲಾವತಿ ನಿರೂಪಿಸಿ, ವಂದಿಸಿದರು.
*****