ಅನುದಿನ ಕವನ-೯೪೫, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್

ಗಜಲ್

ಬೆಳದಿಂಗಳು ನಿನ್ನ ಕನಸುಗಳಿಗೆ ದಾರಿ ಬೆಳಕಾಗುವುದು ಮಲಗು ಒಲವೆ
ಮಿಂಚುಹುಳು ನಿನ್ನಂದದ ನಿದಿರೆಗೆ ಸಾರಥಿಯಾಗುವುದು ಮಲಗು ಒಲವೆ

ತಂಗಾಳಿ ಎಲ್ಲೆಡೆ ಸುಳಿದಾಡಿ ನಿನ್ನ ಮುಂಗುರುಳಲಿ ಗಿರಕಿ ಹೊಡೆದಿಹುದು
ಇರುಳಿನ ಕಪ್ಪು ನಿನ್ನ ಚಂದದ ರೆಪ್ಪೆಗಳ ನೇವರಿಸುವುದು ಮಲಗು ಒಲವೆ

ಆಗಸದಲೆಲ್ಲೋ ಅನುರಣಿಸುತಿದೆ ನಿನಗಾಗಿ ನಿದಿರಾಮಂದಿರದ ಮೌನರಾಗ
ಚಿಕ್ಕೆಯೊಂದು ತನ್ನಂಗಳದ ಜೋಕಾಲಿಯಲಿ ತೂಗುವುದು ಮಲಗು ಒಲವೆ

ನೆಲ ಬಾನೆರಡೂ ಕಾರಿರುಳ ಮುಸುಕ ಹೊದ್ದು ಬೆಳಗಿನ ಕನಸ ಕಾಣುತಿಹವು
ನಿಶ್ಶಬ್ದತೆಯ ಹಕ್ಕಿಯು ರೆಕ್ಕೆಯರಳಿಸಿ ನಿನ್ನ ಬಳಸುವುದು ಮಲಗು ಒಲವೆ

ಜಗದ ಜಂಜಡಗಳನೆಲ್ಲ ತೊಡೆದುಹಾಕುವಂತೆ ಕಾದಿಹುದು ಸಿದ್ಧನ ತೋಳು
ಎಲ್ಲ ಪರಿಧಿಗಳ ಮೀರಿ ನನ್ನೆದೆ ನಿನ್ನ ಹುದುಗಿಸಿಕೊಳುವುದು ಮಲಗು ಒಲವೆ


-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.
*****