ಕೊಪ್ಪಳ, ಆ.5: ತಾಲೂಕಿನ ಹೊಸಹಳ್ಳಿ (ಎಲ್)ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಟೆಕ್ಸಾಸ್ ಇನ್ಸ್ ಟ್ರೂ ಮೆಂಟ್ಸ್ ಸಂಸ್ಥೆ ಮತ್ತು ಯೂಥ್ ಫಾರ್ ಸರ್ವಿಸ್ ಸಹಯೋಗದಲ್ಲಿ ಉಚಿತ ಪುಸ್ತಕ, ಪರಿಕರಗಳು, ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು. ಶಾಲೆಯ 1ರಿಂದ 8ನೇ ತರಗತಿಯ ವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ಉಚಿತ ಬ್ಯಾಗ್, ನೋಟ್ಸ್ ಪುಸ್ತಕಗಳು, ಲೇಖನ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಳನ್ನು ವಿತರಿಸುವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರು, ಸದಸ್ಯರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಅಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಅಯಾನ್ ಟಯರ್ಸ್ ನ ಮುಖ್ಯಸ್ಥರು, ಶಾಲಾ ಪ್ರಭಾರಿ ಮುಖ್ಯಗುರುಗಳು, ಶಿಕ್ಷಕವೃಂದ ದವರು,ಶಿಕ್ಷಣ ಪ್ರೇಮಿಗಳು, ಊರಿನ ಗುರು ಹಿರಿಯರು ಭಾಗವಹಿಸಿದ್ದರು . ಬೆಂಗಳೂರಿನ ಟೆಕ್ಸಾಸ್ ಇನ್ಸ್ ಟ್ರೂ ಮೆಂಟ್ ಸಂಸ್ಥೆ ಮತ್ತು ಯೂಥ್ ಫಾರ್ ಸರ್ವಿಸ್ ರವರಾದ ಗಿರೀಶ್ ಬಿಜ್ಜಳ್, ಗುರಂಗ್, ಜನ್ನೇಶ್ವರನ್, ಆಯೂಸ್ ಹಾಗೂ ಸಿದ್ಧಾರ್ಥ್ ಅವರು ಮಕ್ಕಳಿಗೆ ಬ್ಯಾಗ್ ಗಳನ್ನು ವಿತರಿಸಿದರು. ಅಧ್ಯಾಪಕಿ ಶ್ರೀಗೌರಿ ಬಿಜ್ಜಳ್ ನಿರೂಪಿಸಿದರು. ಅಧ್ಯಾಪಕಿ ಗೌರಮ್ಮ ಆರ್ ವಂದಿಸಿದರು.