ಅನುದಿನ‌ ಕವನ-೯೪೮, ಕವಿ: ಆರಿಫ್ ರಾಜಾ, ಇಳಕಲ್ಲು

ಕ್ರಾಂತಿಕಾರಿ, ಜನ ಕವಿ ಗದ್ದರ್ ಅವರು ಇನ್ನೂ ನೆನಪು ಮಾತ್ರ. ತಮ್ಮ ಹೋರಾಟದ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು. ಭೌತಿಕವಾಗಿ ನಮ್ಮನ್ನಗಲಿದ್ದರೂ ದೇಶದ ಕೋಟ್ಯಾಂತರ ಜನರ ಹೃದಯದಲ್ಲಿ ಸದಾ ಕ್ರಾಂತಿ ಗೀತೆಯ ಕಹಳೆ ಮೊಳಗಿಸುತ್ತಾ ಅಚ್ಚಹಸಿರಾಗಿರುತ್ತಾರೆ.
ಕವಿ ಆರಿಫ್ ರಾಜಾ ಅವರು 12 ವರ್ಷಗಳ ಹಿಂದೆ ಗದ್ದರ್ ಅವರ ಕುರಿತು ಬರೆದ ಕವಿತೆ ಯನ್ನು ಪ್ರಕಟಿಸುವ ಮೂಲಕ ಕವಿ ಮತ್ತು ಕರ್ನಾಟಕ‌ ಕಹಳೆ ಹಾಡು ಹಕ್ಕಿಗೆ ಕಾವ್ಯ‌ನಮನ ಸಲ್ಲಿಸುತ್ತಿದ್ದೇವೆ.🙏💙

ಕವಿತೆ ಓದಿದ ಮೇಲೆ
ಇಲ್ಲ ಇಲ್ಲ ಕವಿತೆ ಕುಣಿಸಿದ ಮೇಲೆ
ಆ ಕವಿ
ತನ್ನ ಕೋಣೆಗೆ ಕರೆದೊಯ್ದ

ಜೇಡರ ಬಲೆ ತಲೆ,ಕೋಣೆ
ರಾಜಕೀಯ ವಸ್ತು ಸಂಗ್ರಹಾಲಯ
ಗೋಡೆಗೆ ಮಾಸಿದ ಪಟ
ಗಾರೆ ನೆಲ ಕರಪತ್ರದ ಹೊಲ

ಆ ಕಡೆ ಈ ಕಡೆ
ಕಾಡು ಬೆಕ್ಕಿನಂತೆ ಕಣ್ಣಾಡಿಸಿದವನೇ
ಬೆಳಕು ಜಿನುಗಲು
ಇದ್ದ ಒಂದೇ ಒಂದು ಕಿಂಡಿಗೆ ಪುಸ್ತಕ ಅಡ್ಡವಿಟ್ಟ
ಬಾಗಿಲು ಬಂದು ಮಾಡಿದ ಚಿಲಕ ಹಾಕಿದ
ಕಡ್ಡಿ ಗೀರಿ ಕ್ಯಾಂಡಲ್ ಹೊತ್ತಿಸಿದ
ಮತ್ತೆ ಪರೀಕ್ಷಿಸಿದ ಪೆಕರು ಹಾಗೆ

ಗಬಕ್ಕನೆ ಕೈ ಹಿಡಿದ,ಉಡದ ಹಿಡಿತ
ಭಯ ಬೆವರು
ಕವಿಯ ಸಹವಾಸ ಗುರು

ಶರ್ಟು ಕಳೆದು ಪದರು ಪದರು ಬಿಚ್ಚಿ ತೋರಿಸಿದ
ಎದೆಯ ಎಡಭಾಗದಲಿ ನೆಟ್ಟ ಒಂದು ಕಾಡತೂಸು
ಸಾವಿಗೂ ಬಾಳಿಗೂ ಸೇತುವೆಯಾಗಿ ನಿಂತ
ಮರೆಯಲಾಗದ್ದನ್ನು ಮರೆಯಬಾರದ್ದನ್ನು ಮರೆಯಲೇ ಬೇಕಾದ್ದನ್ನು
ಮುರಿದ ಮುಳ್ಳಾಗಿ ನೆನಪಿಸುವ
ಆ ಒಂದು ಕಾಡತೂಸನ್ನು

ಕಾಲವು ಸ್ಥಂಭಿಸಿ ಕ್ಷಣವೊಂದು ಅಮರವಾದಂತೆ
ಅದರೊಳಗಿಂದ ಕೇಳುತ್ತಿತ್ತು
ಕುಟುರ್ ಹಕ್ಕಿಯ ಹಾಡು
ಎಲೆ ಮರೆಯ ಕಾಡು


-ಆರಿಫ್ ರಾಜಾ, ಇಳಕಲ್ಲು