ಬಳ್ಳಾರಿ, ಆ.9: ಗದಗಿನಿಂದ ಹೊಸಪೇಟೆಗೆ ವಿಸ್ತರಿಸುವ ಎರಡು ವೇಗದೂತ ರೈಲುಗಳನ್ನು ಬಳ್ಳಾರಿಯ ವರೆಗೆ ವಿಸ್ತರಿಸಬೇಕು ಎಂದು
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯ ಸಮಿತಿಯ ಅದ್ಯಕ್ಷ ಕೆ ಎಂ ಮಹೇಶ್ವರ ಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು
ರೈಲು ಸಂಖ್ಯೆ 11305 ಹಾಗೂ11306
ದಿನನಿತ್ಯ ಸಂಚರಿಸುವ ಸೋಲಾಪುರ್ ಗದಗ್ ಎಕ್ಸ್ಪ್ರೆಸ್ ರೈಲು ಹಾಗೂ ಮುಂಬೈ ಸೊಲ್ಲಾಪುರ್ ಗದಗ್ ಎಕ್ಸ್ಪ್ರೆಸ್ ( ಸಂಖ್ಯೆ 11139 ಹಾಗೂ 11140) ರೈಲಿನ ಸೇವೆಯನ್ನು ಹೊಸಪೇಟೆವರೆಗೆ ವಿಸ್ತರಿಸಿರುವದಾಗಿ ರೈಲ್ವೆ ಇಲಾಖೆ ತಿಳಿಸಿದ್ದು ಈ ಎರಡು ರೈಲುಗಳ ಸೌಕರ್ಯ ಬಳ್ಳಾರಿ ಪ್ರಯಾಣಿಕರಿಗೂ ಅಗತ್ಯವಾಗಿದೆ.
ರೈಲ್ವೆ ಇಲಾಖೆಯ ಮಲತಾಯಿ ಧೋರಣೆಯಿಂದ ಬಳ್ಳಾರಿ ನಿರ್ಲಕ್ಷ್ಯಸಲಾಗುತ್ತಿದೆ ಎಂದು ದೂರಿರುವ ಅವರು ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಬಹು ವರ್ಷಗಳಿಂದ ಎರಡು ರೈಲುಗಳನ್ನು ಬಳ್ಳಾರಿ ವರೆಗೆ ವಿಸ್ತರಿಸುವಂತೆ ಸಾಕಷ್ಟು ಬಾರಿ ಮನವಿ ಪತ್ರಗಳನ್ನು ಕಳಿಹಿಸಲಾಗಿತ್ತು ಎಂದು ನೆನಪಿಸಿದ್ದಾರೆ.
ನಿಯೋಗದ ಮೂಲಕ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಹಾಗೂ ದೆಹಲಿಯ ರೈಲ್ವೆ ಬೋರ್ಡ್ ಅಧಿಕಾರಿಗಳನ್ನು ಮತ್ತುಲೋಕಸಭಾ ಸದಸ್ಯರು ಮತ್ತು ಮಂತ್ರಿಗಳನ್ನು ಭೇಟಿ ಮಾಡಿ ಈ ರೈಲುಗಳನ್ನು ಬಳ್ಳಾರಿವರೆಗೆ ವಿಸ್ತರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ವಿವರಿಸಿರುವ ಮಹೇಶ್ವರ ಸ್ವಾಮಿ ಬಳ್ಳಾರಿ ರೈಲ್ವೆ ಪ್ರದೇಶ ನೈರುತ್ಯ ರೈಲ್ವೆ ವಲಯಕ್ಕೆ ಅತ್ಯಂತ ಹೆಚ್ಚಿನ ಆದಾಯವನ್ನು ನೀಡುತ್ತಿರುವ ಪ್ರದೇಶವಾಗಿದ್ದು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದ್ದಾರೆ.
ಬಳ್ಳಾರಿ ರೈಲು ಮಾರ್ಗ ಕೇವಲ ಗೂಡ್ಸ್ ರೈಲುಗಳಿಗೆ ಸೀಮಿತಗೊಳಿಸಿ ಗೂಡ್ಸ್ ರೈಲುಗಳ ಓಡಾಟಕ್ಕೆ ಆದ್ಯತೆ ನೀಡಿ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಅನ್ಯಾಯವನ್ನು ಮಾಡುತ್ತಿದೆ ಎಂಬುದಕ್ಕೆ ಎರಡು ರೈಲುಗಳು ಬಳ್ಳಾರಿವರೆಗೆ ವಿಸ್ತರಣೆ ಆಗದಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಬುಧವಾರ ನವದೆಹಲಿಯಲ್ಲಿರುವ ಬಳ್ಳಾರಿ ಲೋಕಸಭಾ ಸದಸ್ಯರ ಗಮನಕ್ಕೂ ಈ ವಿಷಯವನ್ನು ತರಲಾಗಿದ್ದು ಅವರು ರೈಲ್ವೆ ಮಂತ್ರಿಗಳಲ್ಲಿ ವಿಷಯವನ್ನು ಪ್ರಾಸ್ತಾಪಿಸುವುದಾಗಿ ವಾಗ್ದಾನ ಮಾಡಿರುತ್ತಾರೆ ಹಾಗೂ ಆದಷ್ಟು ಬೇಗ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಭೇಟಿ ಮಾಡಲು ನಿಯೋಗ ತೆಗೆದುಕೊಂಡು ಹೋಗುವುದಾಗಿ ಕೂಡ ತಿಳಿಸಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
——