ಹಗ್ಗ ಹೊಸೆಯುತ್ತೇನೆ
ನಾನೊಂದು ಹಗ್ಗ ಹೊಸೆಯತ್ತೇನೆ
ಹೊಸೆದು ಮಾರಾಟ ಮಾಡುತ್ತೇನೆ
ಅಷ್ಟೇ ಗೊತ್ತು ನನಗೆ
ಯಾರ ಕೈಗೆ ಚಾಟಿಯಾಯಿತೋ
ಯಾರ ಮೈ ಚರ್ಮ ಸುಲಿಯುತೋ
ನನಗೇನು ಗೊತ್ತು..
ಯಾರ ಹಸಿವು ಹಿಂಗಿಸಿತೋ
ಯಾರ ತೃಷೆಯ ನೀಗಿಸಿತೋ
ಅದು ಹಗ್ಗಕ್ಕೇ ಗೊತ್ತು
ಬಿದ್ದ ಬಡವರನು ಎಬ್ಬಿಸಿತೋ
ಎದ್ದು ಮೆರೆದವರ ಬೀಳಿಸಿತೋ
ಸುದ್ದಿಯಾಗಲಿಲ್ಲ
ಅಳುವ ಮಕ್ಕಳನು ತೂಗಿತೋ
ಆಳುವವರನು ಬಾವಿಗೂ ತಳ್ಳಿತೋ
ಕೇಳುವವರಾರು
ಯಾರ ಕೊರಳಿಗೆ ಕುಣಿಕೆಯಾಯಿತೋ
ಯಾರ ಬೆರಳಿಗೆ ಬಿಲ್ಲಿನ ದಾರವಾಯಿತೋ
ಅರಿತವಾರೋ
ಹಗ್ಗ ಹೊಸೆಯುವುದು ನನ್ನ ಕರ್ಮ
ಅದರ ಸದ್ಬಳಕೆ ಅವರವರ ಧರ್ಮ
ತಿಳಿದಿಲ್ಲ ಇದರ ಮರ್ಮ
-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.