ಹುಬ್ಬಳ್ಳಿ, ಆ.13 : ಪ್ರಜಾಪ್ರಭುತ್ವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ರಕ್ತ ಪಂಪ್ ಮಾಡುವ ಹೃದಯ ಇದ್ದಂತೆ. ಈ ಹೃದಯವನ್ನು ಕೊಟ್ಟಿರುವುದು ನಮ್ಮ ಸಂವಿಧಾನ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿರುವುದು ನಮ್ಮ ಸಂವಿಧಾನ. ಹೀಗಾಗಿ ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಸುಳ್ಳು ಮತ್ತು ತಿರುಚಿದ ಸುದ್ದಿಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಚಾರ ಎಸಗಬಾರದು ಎಂದರು. 24×4 ಸುದ್ದಿ ವಾಹಿನಿಗಳು ಬಂದ ನಂತರ ಸಿನಿಮಾ-ರಾಜಕಾರಣ-ಕ್ರೈಂ ಸುದ್ದಿಗಳು ಮಾಧ್ಯಮಲೋಕವನ್ನು ಆವರಿಸಿಕೊಂಡು ಜನರ ಸಮಸ್ಯೆಗಳು ಹಿನ್ನೆಲೆಗೆ ಸರಿದಿವೆ. ಟಿ.ಆರ್.ಪಿ ದಾಹಕ್ಕೆ ಬಿದ್ದು ಸತ್ಯಕ್ಕೆ ಅಪಚಾರ ಆಗಬಾರದು. ಸತ್ಯವನ್ನು ತೋರಿಸದಿದ್ದರೂ ತೊಂದರೆ ಇಲ್ಲ. ಆದರೆ ಸುಳ್ಳನ್ನು ಮಾತ್ರ ತೋರಿಸಬೇಡಿ. ಸುಳ್ಳು ಮತ್ತು ತೇಜೋವಧೆಯನ್ನು ಸಹಿಸಿಕೊಳ್ಳುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಪತ್ರಕರ್ತರು ಮತ್ತು ಮಾಧ್ಯಮಗಳು ಬಹಳ ಜವಾಬ್ದಾರಿಯಿಂದ, ಮಾನವೀಯತೆಯಿಂದ ವರ್ತಿಸಬೇಕು ಎಂದರು. ಪತ್ರಕರ್ತ ಸಮೂಹದ ಸಮಸ್ಯೆಗಳಿಗೆ ಹಂತ ಹಂತವಾಗಿ ಸ್ಪಂದಿಸಿ ಸರ್ಕಾರದ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಜನ ಸೇವಕ ಆಗಲು, ಉತ್ತಮ ರಾಜಕಾರಣಿ ಆಗಲು ಹೃದಯ ಇದ್ದರೆ ಸಾಕು. ಎಂಥಾ ಹೃದಯ ಅಂದರೆ ಅದು ಸಚಿವ ಸಂತೋಷ್ ಲಾಡ್ ಅವರಿಗೆ ಇರುವ ಸ್ಪಂದನೆಯ, ಜನರ ನೋವಿಗೆ ಮಿಡಿಯುವ ಲಾಡ್ ಅವರ ಹೃದಯ ಇರಬೇಕು ಎಂದು ಕೆ.ವಿ.ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಪೇಪರ್ ಹಾಕುವ ಹುಡುಗನಾಗಿ ಪತ್ರಿಕಾ ರಂಗಕ್ಕೆ ಪ್ರವೇಶ ಮಾಡಿದ ಕೆ.ವಿ.ಪ್ರಭಾಕರ್ ಅವರು ತಮ್ಮ ನಿರಂತರ ಶ್ರಮ ಮತ್ತು ಬದ್ಧತೆ ಹಾಗೂ ಹರಿತ ಬರವಣಿಗೆ ಮೂಲಕ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರ ಮಾಧ್ಯಮ ಸಂಯೋಜಕರಾಗಿ ಬಂದ ಪ್ರಭಾಕರ್ ಅವರು ಅಧಿಕಾರ ಇಲ್ಲದಿದ್ದಾಗಲೂ ಸಿದ್ದರಾಮಯ್ಯ ಅವರ ನೆರಳಲ್ಲೇ ಉಳಿದು ತಮ್ಮ ಬದ್ಧತೆ ಹಾಗೂ ಹೆಜ್ಹೆ ಗುರುತುಗಳನ್ನು ದಾಖಲಿಸಿದ್ದಾರೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ನಾನಾ ಮಾಧ್ಯಮಗಳ 12 ಮಂದಿ ಪತ್ರಕರ್ತರು ವಾರ್ಷಿಕ ಪ್ರಶಸ್ತಿ ಸ್ವೀಕರಿಸಿ ಸನ್ಮಾನಿಸಲ್ಪಟ್ಟರು. ಕಾರ್ಮಿಕ ಸಚಿವರೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಶ್ ಲಾಡ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೋಚನೇಶ ಹೂಗಾರ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಕಾರ್ಯಕಾರಣಿ ಸದಸ್ಯರಾದ ಗಣಪತಿ ಗಂಗೊಳ್ಳಿ ಉಪಸ್ಥಿತರಿದ್ದರು.