ಸ್ವಾತಂತ್ರ್ಯದ ಗುರುತು
ಅರಳಿದ ಹೂಗಳ ಗಮನಿಸಿರಿ
ಮಕ್ಕಳ ನಗುವ ಆಸ್ವಾದಿಸಿರಿ
ರೈತರ ಮೈ ಬೆವರ ಸಹಿಸಿರಿ
ಹೆಂಗಳೆಯರ ಮಾತ ಆಲಿಸಿರಿ
ಮಣ್ಣ ಕಣಕಣ ಪೂಜಿಸಿರಿ
ಸಿಗುವನು….
ಎಲ್ಲ ಗೆರೆಗಳಿಗೆ ಸಿಕ್ಕವನು
ಎಲ್ಲ ಎಲ್ಲೆಗಳಿಗೆ ಕಾಣುವನು
ಎಲ್ಲ ಮಿತಿಗಳಿಗೆ ಒಗ್ಗಿದವನು
ಎಲ್ಲ ನೀರಿನಲಿ ಕರಗಿದವನು
ಎಲ್ಲ ಗಾಳಿಯಲಿ ಸುಳಿದವನು
ಎಲ್ಲ ನೆಲಗಳಲಿ ಚಿಗುರಿದವನು
ಎಲ್ಲ ಹಾದಿಯ ಮುಳ್ಳು ಕಲ್ಲು ಸರಿಸಿದವನು
ಗುರುತು….
ನಾನು ಮರೆತರು
ಭೂಮಿ ಮರೆಯದು
ಬಚ್ಚ ಬಾಯಿಯ ಹಚ್ಚ ನಗುವಿನ
ಖಂಡ ಕಾಣುವ ತುಂಡು ಉಡುಗೆಯ
ದಡಬಡ ನಡಿಗೆಯ ಬಡಬಡ ಮಾತಿನ
ತನ್ನದೆಲ್ಲವ ಮನುಕುಲಕೆ ಧಾರೆಯೆರೆದವನ
ನಾನು ಮರೆತರು…
ಸ್ವಾತಂತ್ರ್ಯದ ನಿಜ ಅರ್ಥ ತಿಳಿದಿರುವ…
ಗಾಳಿ ನೀರು ಬೆಂಕಿ ಮಣ್ಣು ಗಗನ ಗ್ರಹ ತಾರೆಗಳು ಮರೆಯರು
ಗಾಂಧಿ ಗುರುತು
ಇಷ್ಟು ಸಾಕು
ಗುರುತು ಬೇಡೆಂದವನ ಗುರುತಿಡುವ
ಗುರುತೇ ಇರದ ನಾನೇಕೆ ಬೇಕು?
-ಟಿ.ಪಿ.ಉಮೇಶ್, ಚಿತ್ರದುರ್ಗ