ಅನುದಿನ ಕವನ-೯೫೭, ಕವಿ: ಮಲ್ಲಿಕಾರ್ಜುನ ಗೌಡ ತೂಲಹಳ್ಳಿ

ನಿನ್ನ ಕಾಣುವ ಬೆಳಕು ಕತ್ತಲು
ಕೇಳುವ ಶಬ್ದ ನಿರ್ವಾತ
ನುಡಿಯಲಕ್ಷರ ಮರೆವು
ಸೋಕುವ ತನು ಉರಿವ ಕರ್ಪೂರ

ಇರುವುದೆಂಬುವ ಬೆಟ್ಟ
ಕಂಗಳ ಗಂಟು ಬೆನ್ನಿನ ಹೊರೆ
ಪಾದವೂರಲು ಹಾಸಿದ ನೆಲ
ಮಂಜಿನ ಪೊರೆ

ಒಡ್ಡಿರುವೆ ನೀನು ಸಕಲೇಂದ್ರಿಯಕೆ ಮೋಡಿ
ಮೋಡಿಗಡಿಯಾಳ್ತನವ ಬೇಡಿ

ನಾನೆಂಬ ನಾನಳಿದು
ಒಮ್ಮೆ ಹಕ್ಕಿ ಒಮ್ಮೆ ಚುಕ್ಕಿ
ಬಾನಿಗೆ ಬಲೆ ಬೀಸುವ
ನಿನ್ನ ತಂತ್ರಕೆ ನಿತ್ಯ ಹೊರಗು

ನಿನ್ನ ಲೋಕವ ದಾಟಿ
ಬೇರೆ ಲೋಕದಿ ಹುಟ್ಟಿ
ಕಣ್ಬಿಟ್ಟಾಗ
ಹರಡಿಕೊಂಡ ನೆಲ
ಸುಟ್ಟ ರೊಟ್ಟಿ
ಸುತ್ತ ಗಿಡ ಗಿಡಗಳ ಕಾಯಿ ಪಲ್ಲೆ
ನೀರಡಿಕೆಗೆ ಹಳ್ಳ ಕೊಳ್ಳ

ಬೆನ್ನ ಬೆಟ್ಟ ಕರಗಿದೆ
ಹರೆಯ ಮರಳಿ ಜಿಗಿದಿದೆ
       -ಮಲ್ಲಿಕಾರ್ಜುನಗೌಡ ತೂಲಹಳ್ಳಿ