ಸರಕಾರಿ ಶಾಲೆಗೆ ಭೂದಾನ: ಮಾದರಿಯಾದ ಯಾಳ್ಪಿ ಮೇಟಿ ಪಂಪನಗೌಡ ಕುಟುಂಬ

ಬಳ್ಳಾರಿ :ಸರಕಾರಿ ಶಾಲೆಗೆ ಲಕ್ಷಾಂತರ ರೂ. ಮೌಲ್ಯದ ಎರಡು ಎಕರೆ ಜಮೀನನ್ನು ನೀಡಿ ಮಾದರಿಯಾಗಿದ್ದಾರೆ ತಾಲೂಕಿನ ಯಾಳ್ಪಿ ಗ್ರಾಮದ ಪಂಪನ ಗೌಡ ಕುಟುಂಬ! ಹೌದು….! ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಚಿಕ್ಕ ಕಟ್ಟಡದಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದ್ದು ಇದರಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಶಾಲಾ ಕಟ್ಟಡ ಚಿಕ್ಕದಾಗಿದ್ದು ವಿದ್ಯಾರ್ಥಿಗಳು ಸಂಖ್ಯೆ ಜಾಸ್ತಿಯಾದ್ದರಿಂದ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಕರು ಪರದಾಡುತಿದ್ದರು. ಮತ್ತು ಶಾಲೆಯಲ್ಲಿ ವಿದ್ಯಾರ್ಥಿಗಳು ಸಹ ಆಟದ ಮೈದಾನ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ತೊಂದರೆಪಡುತ್ತಿದ್ದರು.

ಇದನ್ನು ಮನಗಂಡ ಯಾಳ್ಪಿ ಗ್ರಾಮದ ಮೇಟಿ ಪಂಪನಗೌಡ (ಯಾಳ್ಪಿ ಪಂಪನಗೌಡ) ಕುಟುಂಬ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎರಡು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ದಾನವಾಗಿ ನೀಡಿ ಇತರರಿಗೆ ಆದರ್ಶವಾಗಿದ್ದಾರೆ.  ಈ ಸ್ಥಳದಲ್ಲಿ  ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿರುವ  ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರ ವಿಶೇಷ ಆಸಕ್ತಿಯಿಂದ ಜಿಲ್ಲಾ ಖನಿಜ ನಿಧಿಯಿಂದ 1.40 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ಮತ್ತು ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪನವರ ಅನುದಾನದಲ್ಲಿ ಶಾಲಾ ಕೌಂಪೌಂಡ್ ಸೇರಿದಂತೆ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿಲಾಗಿದೆ.  ಸದ್ಯ ಎಂಟನೇ ತರಗತಿಯವರೆಗೆ ಶಾಲೆಯನ್ನು ನಡೆಸಲಾಗುತ್ತಿದೆ. ಈ ಹೊಸ ಕಟ್ಟಡವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಬಿ ನಾಗೇಂದ್ರ ಇತ್ತೀಚೆಗೆ ಉದ್ಘಾಟಿಸಿದ್ದಾರೆ.

ಸರ್ಕಾರಿ ಸೌಲಭ್ಯಕ್ಕಾಗಿ ಕಾಯದೆ ಪಂಪನಗೌಡರಂತೇ ಸಮಾಜಸೇವಾ ಮನೋಭಾವ ಎಲ್ಲರಲ್ಲಿ ಬಂದಲ್ಲಿ ಸಮಾಜಕ್ಕೆ ಒಳ್ಳೆಯದಾಗಲೂ ಸಾಧ್ಯ ಅವರ ಲಕ್ಷಾಂತರ ರೂಪಾಯಿಗಳ ಜಮೀನನ್ನು ಸರ್ಕಾರಿ ಶಾಲೆಗೆ ನೀಡಿದ್ದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಸದರಿ ಶಾಲೆಗೆ ಅವರ ಕುಟುಂಬದ ಪೂರ್ವಜರಾದ ಗಿರಿಗೌಡ ಪಾರ್ವತಮ್ಮನವರ ಹೆಸರಿಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಗೌಡರ ಕುಟುಂಬ ಕೋರಿದೆ. ಕಾರ್ಯಕ್ರಮದಲ್ಲಿ ಯಾಳ್ಪಿ ಪಂಪನಗೌಡ, ಮೇಟಿ ದಿವಾಕರ್‌ಗೌಡ, ಮೇಟಿ ಬಸವನಗೌಡ, , ಸಚಿವರ ಸಹೋದರ ವೆಂಕಟೇಶ್ ಪ್ರಸಾದ್, ಗೋವರ್ಧನ್‌ರೆಡ್ಡಿ, ಅಲ್ಲಂ ಪ್ರಶಾಂತ್, ಹಗರಿ ಹೊನ್ನೂರಪ್ಪ (ವಂಡ್ರಿ) ಡಿ.ಡಿ.ಪಿ.ಇ ಹನುಮಕ್ಕ ಇ.ಒ ಬಸಪ್ಪ,  ಬಿಇಓ ನಯೀಮೂರ್ ರೆಹಮಾನ್ ಕೆ.ಎಸ್,  ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.