ವರದಿಗಳು ಓದುಗರಲ್ಲಿ ಗೊಂದಲ ಉಂಟು ಮಾಡದೇ ಸರಳವಾಗಿರ ಬೇಕು -ಕೊಪ್ಪಳ ವಿವಿ ಕುಲಪತಿ ಪ್ರೊ.‌ಬಿ.ಕೆ.ರವಿ

ಬಳ್ಳಾರಿ,ಆ.೧೯: ಪತ್ರಿಕಾ ವರದಿಗಳು
ಓದುಗರಲ್ಲಿ ಗೊಂದಲ ಉಂಟುಮಾಡ ಬಾರದು
ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಅವರು ತಿಳಿಸಿದರು.
ನಗರದ ಎಸ್.ಎಸ್.ಎ ಸರಕಾರಿ ಪ್ರಥಮ‌ದರ್ಜೆ ‌ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬರವಣಿಗೆ ಮತ್ತು ಛಾಯಾಗ್ರಹಣ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುದ್ದಿಗಳು ಸರಳವಾಗಿ,ಸಂಕ್ಷಿಪ್ತವಾಗಿದ್ದು ಓದುಗರನ್ನು ಆಕರ್ಷಿವಂತಿರ ಬೇಕು. ೪೦ ವರ್ಷಗಳ ಹಿಂದೆ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ. ಪೋಸ್ಟ್ ಮೂಲಕ ಸುದ್ದಿಗಳನ್ನು ಕಳುಹಿಸಲಾಗುತ್ತಿತ್ತು. ಟೆಲಿಗ್ರಾಂ ಮೂಲಕ ಸುದ್ದಿಗಳನ್ನು ಕಳುಹಿಸಬೇಕಾದರೆ ಸಾಕಷ್ಟು ಸವಾಲುಗಳಿದ್ದವು ಎಂದು ಹೇಳಿದರು.
ಪ್ರಸ್ತುತ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಮೊದಲು ಸುದ್ದಿ ಕೊಡಬೇಕು ಎಂಬ ಧಾವಂತದಲ್ಲಿ ಸತ್ಯಾ ಸತ್ಯತೆಗಳನ್ನು ತಿಳಿಯದೇ ಸುದ್ದಿಗಳನ್ನು ಬಿತ್ತಿರಿಸಿ ಮುಜುಗರಕ್ಕೀಡಾಗುವ ಸನ್ನಿವೇಶಗಳೂ ಸಾಕಷ್ಟಿವೆ ಎಂದು ಕೆಲವು ಉದಾಹರಣೆಗಳ ಮೂಲಕ ತಿಳಿಸಿದರು.
ತಾವು ಪತ್ರಕರ್ತರಾಗಿ ಸೇವೆ ಸಲ್ಲಿಸುವ ವೇಳೆಯಲ್ಲಿ ಭಾಷೆಯ ಬಳಕೆ, ಬರವಣಿಗೆ ಹೇಗೆ ಇತ್ತು. ಅದರಿಂದ ಪತ್ರಕರ್ತರಿಗೆ ಸಿಗುವ ಗೌರವ ಹೇಗಿತ್ತು ಎಂಬುದನ್ನು ತಿಳಿಸಿದರಲ್ಲದೆ, ಚಿತ್ರವೊಂದು ಇಡೀ ಸುದ್ದಿಯನ್ನೇ ತಿಳಿಸುತ್ತದೆ. ವರದಿಗಾರಿಕೆಗೆ  ಬರವಣಿಗೆ ಹೇಗೆ ಮುಖ್ಯವೋ ಛಾಯಾಚಿತ್ರವೂ ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು.


ಬರವಣಿಗೆ ಮತ್ತು ಛಾಯಾಗ್ರಹಣ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಿದ ಹವ್ಯಾಸಿ ಛಾಯಾಗ್ರಾಹಕ ಸತೀಶ್ ಮುರಾಳ ಅವರು, ಇಂದಿನ ದಿನಗಳಲ್ಲಿ ಮೊಬೈಲ್ ಇದ್ದ ಪ್ರತಿಯೊಬ್ಬರೂ ಫೋಟೋ ಗ್ರಾಫರ್ ಆದರೆ ಸನ್ನಿವೇಶಕ್ಕೆ ತಕ್ಕಂತೆ ಫೋಟೋ ಕ್ಲಿಕ್ಕಿಸುವವನೇ ನಿಜವಾದ ಛಾಯಾಗ್ರಾಹಕ. ಐಎಸ್‌ಒ, ವೇಗ, ಅಪಾರ್‍ಚರ್ ಈ ಮೂರು ತಿಳಿದವನು ಉತ್ತಮ ಫೋಟೋಗ್ರಾಫರ್ ಆಗಬಲ್ಲ. ಫೋಟೋ ತೆಗೆಯುವ ಕೌಶಲ್ಯವನ್ನು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು. ನಮ್ಮ ಸುದ್ದಿ, ಫೋಟೋ ಹೇಗಿದೆ ಎಂದು ಅರ್ಥೈಸಿಕೊಳ್ಳಬೇಕಾದರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಫೋಟೊ, ಸುದ್ದಿಗಳನ್ನು ಗಮನಿಸಬೇಕು. ಈ ಮೂಲಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ನಾಗೇಂದ್ರ ಮಾತನಾಡಿ, ಬದಲಾದ ಕಾಲಘಟ್ಟದ ತಾಂತ್ರಕತೆ ಮೊಬೈಲ್ ಮೂಲಕವೇ ಸುದ್ದಿಗಳನ್ನು ಬರೆದು ಕಳುಹಿಸಬಹುದಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಐ.ಹೊನ್ನೂರಾಲಿ, ಒಂದು ಛಾಯಾ ಚಿತ್ರ ಸಾವಿರ ಪದಗಳಿಗೆ ಸಮ ಎಂದರು. ಪತ್ರಕರ್ತರಿಗೆ ನೈತಿಕತೆ ತುಂಬಾ ಮುಖ್ಯ. ಎಚ್ಚರಿಕೆಯಿಂದ ವರದಿಗಳನ್ನು ಮಾಡಬೇಕು. ಸದಾ ಜನರ ಪರವಾಗಿದ್ದು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವುದರ ಜತೆ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ.ಮಂಜುನಾಥ್ ರೆಡ್ಡಿಯವರು ಮಾತನಾಡಿ ಪತ್ರಿಕೋದ್ಯಮ ವಿಭಾಗದ ಅಭಿವೃದ್ಧಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ಸರಳ ಸಂಪದ ವನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಸನ್ಮಾನ: ಪತ್ರಿಕೋದ್ಯಮ ವಿಭಾಗದಿಂದ ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿ, ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಡಾ.ನಾಗೇಂದ್ರ, ವಿ.ಎಲ್.ಪ್ರಕಾಶ್, ವಿಶೇಷ ಉಪನ್ಯಾಸ ನೀಡಿದ ಸತೀಶ್ ಮುರಾಳ, ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು, ಉಪನ್ಯಾಸಕರು, ಹಳೆಯ ವಿದ್ಯಾರ್ಥಿಗಳಾದ ಕನ್ನಡನಾಡು ಪತ್ರಿಕೆಯ ಉಪಸಂಪಾದಕ ರಾಕೇಶ್.ವಿ. ಹಾಗೂ ಹೋರಾಟಗಾರ ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ವಿವಿಯ ಕುಲಸಚಿವ ಕೆ.ವಿ.ಪ್ರಸಾದ್, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿವಲಿಭಾಷಾ, ಸಹ ಪ್ರಾಧ್ಯಾಪಕ ಡಾ.ವೈ.ಜನಾರ್ದನ್, ಪತ್ರಿಕೋದ್ಯಮ ವಿಭಾಗದ ಹಿರಿಯ ಉಪನ್ಯಾಸಕ ಟಿ.ಜಯರಾಂ, ಗಿರೀಶ್‌ಕುಮಾರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನುಷಾ ಪ್ರಾರ್ಥಿಸಿದರು. ಸಂಜನಾ ಹಾಗೂ ರಾಜೇಶ್ವರಿ ನಿರ್ವಹಿಸಿದರು.
—–