ಜೀವ ಸಂಚಾರ…
ಎಷ್ಟೊಂದು ದಿನಗಳಾದವು
ನಿನ್ನ ಊರಿನ ದಾರಿ ಮರೆತು
ಖುಷಿಯ ಹೆಗಲನ್ನೇರಿದ ಸವಾರಿ ಮರೆತು
ಎದೆಯ ಅಂಗಳದಲ್ಲಿ ಹರವಿದ
ನಿನ್ನ ಮುಗುಳ್ನಗೆಯ ಮೌನ ಮರೆತು
ಅದೆಷ್ಟೊಂದು ನಿರಾಸಕ್ತಿ
ಅನಾಸಕ್ತಿಗಳ ಧೂಳಿನ ಕಣಗಳು
ಹಾರಾಡುತಿವೆ ಗಾಳಿಗುಂಟ
ಮುಸ್ಸಂಜೆಯ ಕೊನೆ
ದಿನಪನ ನಡೆಯೂ
ಕುಂಟುತ್ತಾ ಸಾಗಿದೆ
ಅದೇನೇ ಇದ್ದರೂ
ನಿನ್ನೊಂದಿಗೆ ಕಳೆದ
ನೆನಪುಗಳ ಅಂಕಣಗಳೇ
ಈ ಬಂಜರು ಸಂಜೆಯ
ಮನದಲಿ ಜೀವ ಸಂಚಾರ
ನೀನಿರದಾಗ ಸರಿಯಲಾರದೆ
ಮುಷ್ಕರ ಹೂಡುವ
ನೀನು ಸನಿಹದಲಿರುವಾಗ
ಕುದುರೆಯೇರಿ ಓಡುವ
ನಿಷ್ಕರುಣಿ ಸಮಯದೊಂದಿಗೆ
ಜಗಳವಾಡಬೇಕೆನಿಸುತ್ತದೆ
ನೀನಿರದ ಈ ಕಡು ಮೌನದ ಬದುಕು
ಲಯವಿಲ್ಲದ ಶೋಕ ರಾಗವೊಂದರ ಆಲಾಪನೆಯಂತೆ
ಮನವು ತಂತಾನೆ ಅನವರತ ದು:ಖಿಸುತಿದೆ
ಅದೆಲ್ಲ ಇರಲಿ……….
ಈ ಹೊತ್ತು ನೀನಿರಬೇಕಿತ್ತು
ನೆನಪುಗಳ ಹಂಚಿಕೊಳ್ಳಲು ನಿನ್ನ ಜೊತೆ ಬೇಕಿತ್ತು
ಅಂದು ಹಣೆಗಿಟ್ಟ ಮುತ್ತಿನ ಬಿಸುಪು
ಕೈ ಕೈ ಬೆಸದ ಭರವಸೆಯ ಮೌನ ಮಾತು
ಅದೇ ಈ ಸಂಜೆಯ ಬಂಗಾರದ ಕಿರಣ
ನಿನ್ನ ಸಾನಿಧ್ಯದ ಹೊರತಾಗಿ
ಬದುಕಿನಿಂದ ಏನೊಂದೂ ನಿರೀಕ್ಷೆಯಿಲ್ಲ
ನಿನ್ನೊಂದಿಗೆ ಕಳೆದ ಕ್ಷಣಗಳೆಲ್ಲವನ್ನೂ
ಉಸಿರಿನೊಂದಿಗೆ ಇನ್ನಿಲ್ಲದಂತೆ ಪ್ರೀತಿಸುವೆನು
– ಶ್ರೀ, (ಶ್ರೀ ಲಕ್ಷ್ಮಿ ಆದ್ಯಪಾಡಿ) ಮಂಗಳೂರು
—–