ಸಂಸದ ಡಾ.ನಾಸಿರ್ ಹುಸೇನ್ ಬಳ್ಳಾರಿಯ ಹೆಮ್ಮೆ: ಸಚಿವ ಬಿ.ನಾಗೇಂದ್ರ ಗುಣಗಾನ

ಬಳ್ಳಾರಿ: ಆಗಸ್ಟ್.28:ರಾಜ್ಯಸಭಾ  ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಅವರು ಸಣ್ಣ ವಯಸ್ಸಿಗೆ ದೊಡ್ಡ ಹುದ್ದೆಗೆ ಭಾಜನರಾಗಿರುವುದು ಸಂತಸದ ವಿಷಯ. ಅವರು ನಮ್ಮ ಬಳ್ಳಾರಿಯ ಹೆಮ್ಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ಬಳ್ಳಾರಿಯ ಬೆಳಗಲ್ ಕ್ರಾಸ್ ಬಳಿ ರಾಜ್ಯಸಭಾ ಸಂಸದ ಡಾ. ಸೈಯ್ಯದ್ ನಾಸಿರ್ ಹುಸೇನ್ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಭಾಗವಹಿಸಿ ಮಾತನಾಡಿದರು.

ಬಳ್ಳಾರಿಗೆ ಕೀರ್ತಿ ತಂದು ಕೊಡುವ ಕೆಲಸ ಡಾ. ಸೈಯ್ಯದ್ ನಾಸಿರ್ ಹುಸೇನ್ ಅವರು ಮಾಡಿದ್ದಾರೆ, ಬಳ್ಳಾರಿಯಲ್ಲಿ ಹುಟ್ಟಿ ಬೆಳೆದು, ಮೈಸೂರು, ದೆಹಲಿಯಲ್ಲಿ ಶಿಕ್ಷಣ ಪಡೆದು ಕಾಂಗ್ರೆಸ್ ಸೇರಿ ಇಂದು ಈ ಹಂತಕ್ಕೆ ಬಂದಿದ್ದಾರೆ ಎಂದು ಹೇಳಿದ ಸಚಿವರು, ಸಣ್ಣ ಹಂತದ ಒಬ್ಬ ಕಾರ್ಯಕರ್ತ ರಾಷ್ಟ್ರ ಮಟ್ಟಕ್ಕೆ ತಲುಪಬಹುದು ಎಂಬುದಕ್ಕೆ ಡಾ. ಸೈಯ್ಯದ್ ನಾಸಿರ್ ಹುಸೇನ್ ಅವರೇ ಸಾಕ್ಷಿ ಮಾದರಿ ಎಂದು‌ ಮೆಚ್ಚುಗೆ ವ್ಯಕ್ತಪಡಿಸಿದರು.                                               ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಜನರು ಸಂಸದ ನಾಸಿರ್ ಹುಸೇನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು.

ಜನ್ಮ ದಿನದ ಸಂದರ್ಭದಲ್ಲಿಯೇ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿರುವುದರಿಂದ ಸಂಭ್ರಮಾಚರಣೆಯೂ ನಡೆಯುತ್ತಿದೆ, ಕಾರ್ಯಕಾರಿ ಸಮಿತಿಯಲ್ಲಿ ಸಿಎಂಗಳು, ಮಾಜಿ ಸಿಎಂಗಳು, ಕೇಂದ್ರ ಸಚಿವರು, ಪ್ರಧಾನಿ ಮಾಜಿ ಪ್ರಧಾನಿಗಳಿಗೆ ಅವಕಾಶ ನೀಡಲಾಗುತ್ತದೆ. ಪಕ್ಷದ ಅಂತಹ ಮಹತ್ತರವಾದ ಹುದ್ದೆಯನ್ನು ಡಾ. ನಾಸಿರ್ ಹುಸೇನ್ ಅವರು ಪಡೆದಿರುವುದು ಬಳ್ಳಾರಿಗೆ ಒಂದು ಕೀರ್ತಿ ಎಂದು ಶ್ಲಾಘಿಸಿದರು.

ಇದೇ ವೇಳೆ ಸಚಿವ ನಾಗೇಂದ್ರ ಅವರು ಇಪ್ಪತ್ತು ವರ್ಷಗಳ ಹಿಂದೆ ತಾವು ಕಾಂಗ್ರೆಸ್ ಯುವ ಘಟಕದ ಮುಖಂಡರಾಗಿದ್ದ ವೇಳೆ ರಾಷ್ಟ್ರೀಯ ಯುವ ಘಟಕದ ಪದಾಧಿಕಾರಿಯಾಗಿದ್ದ ಡಾ. ಸೈಯ್ಯದ್ ನಾಸಿರ್ ಹುಸೇನ್ ಅವರನ್ನು ಮೆರವಣಿಗೆ ಮೂಲಕ ಕರೆ ತರಲು ಕಷ್ಟಪಟ್ಟಿದ್ದ ಘಟನೆಯೊಂದನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಪಾಲಿಕೆ ಮಹಾಪೌರರಾದ ಡಿ. ತ್ರಿವೇಣಿ, ಉಪ ಮಹಾಪೌರರಾದ ಜಾನಕಮ್ಮ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ವಕ್ಫ್  ಬೋರ್ಡ್ ಅಧ್ಯಕ್ಷ ಹುಮಾಯುನ್ ಖಾನ್, ಮಹಾನಗರ ಪಾಲಿಕೆ ಸದಸ್ಯರು, ರಾಜ್ಯದ ವಿವಿಧ ಜಿಲ್ಲೆಗಳ ವಕ್ಸ್ ಬೋರ್ಡ್ ಅಧ್ಯಕ್ಷರು, ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.