ಈಗ ತಾನೇ ಮಿನುಗಿ ಹೋದ ಮಿಂಚುಹುಳು
ಪುಟ್ಟ ಪ್ಲೇನು ನಭಕ್ಕೆ ಏರಿದಂತೆ
ಕಾಲದ ವೈಪರೀತ್ಯಕ್ಕೆ ನಲುಗಿ ಇಳೆಗಿಳಿದಂತೆ
ಮತ್ತೆ ಕತ್ತಲಿಗೆ ಬೆಳಕು ಮೂಡಿಸಿ
ಮಿಂಚಿ ಮರೆಯಾದಂತೆ
ಕಣ್ಣ ಮುಂದೆಯೇ ಮರೆಯಾಯಿತು
ಕತ್ತಲೆಂದರೆ ಬೆಳಕಿಗೆ ವ್ಯಮೋಹ
ಬೆಳಕೆಂದರೆ ಕತ್ತಲಿಗೆ ಗಾಢ ಮರೆವು
ನಮಗೆಷ್ಟು ಬೇಕು ಬದುಕು
ಉಸಿರು ಕ್ಷಣಿಕ ಮಾತ್ರ
ಆದರೂ ಬದುಕುತ್ತೇವೆ ನೂರು ವರುಷ!
ಹುಳ ಹುಪ್ಪಟೆಗೆಷ್ಟು ಆಯುಷ್ಯವೋ?
ಅವು ಕ್ಷಣಿಕವೆಂದರೂ ಮಣ್ಣ ಕಣದಲ್ಲಿ ಉಳಿಸಿಹೋಗಿರುತ್ತವೆ ಗಾಢ ಗುರುತ
ಹುಡುಕಬೇಕು ಅಲ್ಲಮನಂತೆ
ಮಾತು ಜ್ಯೋತಿರ್ಲಿಂಗವಾದ ಬಗೆಯನ್ನು
ಸ್ವರವು ಪರತತ್ತ್ವವಾದ ವಿಶ್ವಾಸವನ್ನು
ಶ್ವಾಸ-ವಿಶ್ವಾಸಗಳ ನಂಬುಗೆಯಲಿ
ಸ್ನೇಹ ಕೂಡಿ ಬೆಳದಿಂಗಳಾದರೆ ಸಾಕು.
🌳-ಡಾ.ನಿಂಗಪ್ಪ ಮುದೇನೂರು, ಧಾರವಾಡ