ಅನುದಿನ ಕವನ-೯೭೩, ಪ್ರಸಿದ್ಧ ಕವಿಯಿತ್ರಿ: ಅಮೃತಾ ಪ್ರಿತಮ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ

ಪ್ರಸಿದ್ಧ ಕವಿಯಿತ್ರಿ ಅಮೃತಾ ಪ್ರಿತಮ್ ಅವರ ಜನುಮದಿನ ಇಂದು(ಆ.31). ಈ ಹಿನ್ನಲೆಯಲ್ಲಿ ಅವರ ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಅವರಿಗೆ ಗೌರವ ಪೂರ್ವಕವಾಗಿ  ಶುಭಾಶಯಗಳನ್ನು  ತಿಳಿಸುತ್ತಿದೆ!🍀🎂💐👇🌸

ಅವ ಹೇಳುತ್ತಿದ್ದ
ಇವಳು ಕೇಳುತ್ತಿದ್ದಳು
ಜಾರಿಯಲ್ಲಿತ್ತು ಆಟ
ಹೇಳು, ಕೇಳುವುದು

ಆಟದಲ್ಲಿ ಎರಡು ಪತ್ರಗಳಿದ್ದವು
ಒಂದರಲ್ಲಿ ಬರೆದಿತ್ತು ಹೇಳು
ಇನ್ನೊಂದರಲ್ಲಿ ಬರೆದಿತ್ತು  ಕೇಳು

ಈಗದು ವಿಧಿಯೋ
ಅಥವಾ ಕೇವಲ ಕಾಕತಾಳೀಯವೋ ?
ಅವಳ ಕೈಗೆ ಸಿಕ್ಕಿಸಿದ್ದು ಅದೇ ಪತ್ರ
ಅದರಲ್ಲಿ ಬರೆದಿತ್ತು ಕೇಳು

ಅವನು ಹೇಳುವುದು
ಇವಳು ಕೇಳುವುದು
ಅವನ ಆದೇಶ
ಇವಳಿಗೆ ನಿರ್ಬಂಧ
ಅವನ ಉಪದೇಶ
ಇವಳಿಗೆ ನಿಷೇಧ
ಅದು ಅವಳಿಗೂ ತಿಳಿದಿತ್ತು
ಹೇಳುವುದು ಮತ್ತು ಕೇಳುವುದು
ಬರಿಯ ಕ್ರಿಯೆ ಮಾತ್ರವಲ್ಲ

ರಾಜ ವಿಷ ಕುಡಿಯೆಂದ
ಆಕೆ ಮೀರಾಳದಳು

ಆತ ಕಲ್ಲಾಗೆಂದ
ಆಕೆ ಅಹಲ್ಯೆಯಾದಳು

ಆತ ಹೊರಗೆ ಹೋಗೆಂದ
ಆಕೆ ಸೀತೆಯಾದಳು

ಚಿತೆಯಿಂದೆದ್ದಿತ್ತು ಚೀರಾಟ
ಯಾರ ಕಿವಿಗೂ ಕೇಳಿಸಲೇ ಇಲ್ಲ.
ಆಕೆ ಸತಿಯಾದಳು

ಅವಳ ಕೋರಿಕೆಗಳು ಉಸಿರುಗಟ್ಟುತ್ತಿದ್ದವು
ಪದಗಳು ಸಿಲುಕಿಕೊಂಡಿದ್ದವು
ತುಟಿಗಳ ಹೊಲಿಯಲಾಗಿತ್ತು
ಕುತ್ತಿಗೆ ಹಿಸುಕಲಾಗಿತ್ತು
ಅವಳ ಕೈಗೆ  ಎಂದೂ ಸಿಗಲೇ ಇಲ್ಲ ಹೇಳು ಎಂದು ಬರೆಯಲಾಗಿದ್ದ ಆ ಪತ್ರ


-ಅಮೃತಾ ಪ್ರೀತಮ್

 

ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
*****