ಅನುದಿನ ಕವನ-೯೭೪, ಕವಿ: ಡಾ. ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ಏಸೊಂದು ರಾಧೆಯರಿಲ್ಲಿ. ….!?

ಏಸೊಂದು ರಾಧೆಯರಿಲ್ಲಿ. ….!?

1.
ಮತ್ತೆ ಮತ್ತೆ ಬದಲಾಗುವ ಋತು
ಬೀಸಿ ಸುಯ್ಯುವ ಗಾಳಿ
ಗಿಡ ಗಂಟೆ ತೂಗಿ ನಿನಾದ ಹೊಮ್ಮಿ
ಜುಳು ಜುಳು ಹರಿವ ಯಮುನೆಯ ಈ ದಿನನಿತ್ಯ –

ವರ್ತಮಾನದ ಹಾಗೆ ಹಿಂದೆಂದೂ ಗೋಕುಲವಿರಲಿಲ್ಲ!
ಇಲ್ಲಿಗೆ ಒಳ ಬಂದ ಅರಿವಿಲ್ಲ, ಹೊರ ಹೋದ
ಚೆಲುವಿಲ್ಲ, ಹರಿದೋಡುತ್ತಿರಲಿಲ್ಲ ಕಾಲ ಹೀಗೆ
ಎಂದೂ ಗೋಧೂಳಿಯಲಿ ಸಂಜೆಗಡರುತ್ತಿದ್ದ ಕಾವಳ –

ಮುನ್ನ ಕೆಂಪಡರುತ್ತಿರಲಿಲ್ಲ ಮುಗಿಲ ಮುಖಕೆ
ಕಿವಿಯರಳುತ್ತಿರಲಿಲ್ಲ ಇನಿದನಿಯ ಸುಖಕೆ
ಉದ್ಯಾನವನಗಳ ಹೊದರು ಪೊದೆ ಪೊದರುಗಳಲ್ಲಿ
ಪಲ್ಲವಿಸುತ್ತಿರಲಿಲ್ಲ ಬೆಳದಿಂಗಳ ರಾತ್ರಿ –

ಚಂದ್ರನ ಕಂಡು ಸಹಸ್ರ ಸಹಸ್ರ ದರ್ಶನ
ಲೆಕ್ಕವಿಕ್ಕಿದವರಾರೂ ಬಿಕ್ಕುವಿಕೆಯ ಹೆಕ್ಕಿರಲಿಲ್ಲ
ಹಗಲು ಹಲುಬಿರಲಿಲ್ಲ, ಕಾವಳದಲಿ ಕಳವಳಿಸಿ
ಉಮ್ಮಳಿಸಿದರೂ ಹೆಣ್ತನಕೆ ಹೆದರಿ ಹೊರಗೆಂದೂ –

ಕಾಲಿಕ್ಕದವರಿಗೂ ಇಂದು ಕಾಲಂದುಗೆಯ ಗಿಲಗಿಲ ಘಲರು!
ಎಂದೂ ಕೈಜೋಡಿಸದವರೂ ಕೋಲ ತಾಕಿ ತೂಗಿ ತುಯ್ದು
ಹೊಯ್ದು ಹಾಡ – ಪಾಡ ನುಡಿದು ಕೋಲು ಕೋಲೆನ್ನ ಕೋಲೆ . .
ಮನವ ಮಾತಾಡಿಸಿದ ಮಾಧವಗೆ ಕೋಲು ಕೋಲೆನ್ನ ಕೋಲೆ . . .

2.
ಏಸೊಂದು ಗೋಪಿಕೆಯರು! ಒಮ್ಮೆಲೇ sಸಡಗರ
ಹಬ್ಬಿ ಸುಗ್ಗಿ ಸುರಿದಂತೆ, ಹರೆಯ ಹೊಕ್ಕಿ ಯಮುನೆ
ಧುಮ್ಮಿಕ್ಕಿ ಹರಿದಂತೆ, ಎತ್ತರದಿಂದ ಆಳಕ್ಕೆ ಧಬಧಬನೇ
ಧುಮ್ಮಿಕ್ಕಿದ ಜಲಪಾತದಂತೆ – ಸಲಸಲ ಸಲಿಲ –

ಸಲೀಸಾಗಿ ತಾನೇ ತಾನಾಗಿ ಹೊಮ್ಮಿ ನಾ ಬದಲಿಗೆ ನೀ. .
ನಿನ್ನ ಬದಲಿಗೆ ತಾ, ತನ್ನ ಬದಲಿಗೆ ತೇನವೇ
ತಾನ, ತಾನವೇ ಝೇಂಕಾರದ ಓಂಕಾರದಂತೆ ಗಾನ
ಗಂಗೆಯಲಿ ಮಿಂದ ಸಪ್ತ ಸ್ವರಗಳ ವಸ್ತ್ರಾಪಹರಿಸಿ –

ನಿಂದ ನೆಲೆಯಲ್ಲೇ, ನೀರಲ್ಲೇ ಬೆಳಕಿನುಡುಗೆಯ ಉಡಿಸಿ,
ತೊಟ್ಟ ತೊಡುಗೆಯ ಕಳಚಿ, ಬಿಳಿಚಿದ ಮುಖದಲ್ಲಿ
ಹೊಸ ಬೆಳೆ ಬೆಳಸ ಹೊಮ್ಮಿಸಿ, ತನುವೆಲ್ಲಾ ತೆನೆದೂಗಿ
ತೂಗಾಡುವಂತಾಗಿ – ತಾರಾಡಿ ಓಲಾಡಿ ಜಾಲಾಡಿ –

ಜಗದ ಮಡಿಲಲಿ, ಮುಗಿಲ ಒಡಲಲಿ
ಹೆಕ್ಕಿ ಹಿಡಿದ ಮಿಡಿತ, ಒಡಲೊಡಲ ಮೊರೆತ
ಸುರತವಲ್ಲದ ಸಾಂಗತ್ಯದಲ್ಲೂ ಹುಚ್ಚುಹೊಳೆ ಭರತ!
ಮುನ್ನೀರ, ಕೆನ್ನೀರ, ಕಣ್ಣೀರ ಕಲಕು ಮಲಕಿನ –

ಕಲೆತ, ಕೆನೆತವಲ್ಲದ ಆ ಹೇಷಾರವವ ಮಾಧವ
ನೀ ನುಡಿಸಿದವ. ನಮ್ಮೆಲ್ಲರ ಒಡಲಿನಲಿ ಕಂಪಿಸಿ
ಪಲ್ಲವಿಸಿದೆ ಪ್ರಫುಲ್ಲತೆಯ, ವಿದ್ಯುಲ್ಲತೆಯ ಮೈಯ
ನರನಾಡಿಗಳಲಿ ಪ್ರವಹಿಸಿ – ಪ್ರಣವ ನಾದವಾದವ –

ಹೇ ಮಧುಸೂಧನ,- ಮೈಮರೆಸಿದ ನಿನ್ನ ನಾದ ಲೋಕದ
ನಾಗಿನಿಯರು ನಾವು, ಮೈ ಮಣಿಸಿ, ಕುಣಿಸಿ, ತಣಿಸಿದವನೇ
ನರ ನಾರಾಯಣನೇ, ಆಧ್ಯಾತ್ಮದರಿವಿನ ಉತ್ತುಂಗ ತುರೀಯಾತುರ
ಅವಸ್ಥೆಯ ಮೈ ಝಲಿಸಿದವನೇ – ಜಾಗರ-

ನಾಮ ಸ್ವರೂಪನೇ, ವಿಶ್ವ ರೂಪನೇ, ಬಾಯಲ್ಲಿ
ಅಡಗಿಸಿಟ್ಟುಕೊಂಡ ಬ್ರಹ್ಮಾಂಡದ ಅರಿವಿನವನೇ, ತರಳ ತುಂಟ
ಬೆಣ್ಣೆ ಕದ್ದ ಕಳ್ಳ ಕೃಷ್ಣನೇ, ನಮ್ಮೆಲ್ಲರ ಕಾಮನೇ
ನನ್ನ ರಾಮನೇ, ಅವಳ ಧಾಮನೇ, ಹೆಂಗಳೆಯರ ಪರಂಧಾಮನೇ –

ಅಪರಂಪಾರ ನಡೆಯ ನಿತ್ಯ ನೂತನ, ಪರ ಲೋಕ ಭ್ರಮರ
ಸುಲಗ್ನ ಸಂಭ್ರಮಿಸಿದ ಪರಿಯನ್ನೇ ಪರಿಣಯವೆನ್ನಿಸಿದ್ದ ಭ್ರಮೆಯ ಅಳಿಸಿ,
ಅರಳಿಸಿ ಕುಂಕುಮ ನಡು ನಾಭಿಗಳಲ್ಲಿ ಪಲ್ಲವಿಸಿದ ಪದ್ಮನಾಭನೇ,
ಪನ್ನಗಾಂತನೇ ಪರಿಪರಿ ಪರಿಣಮಿಸುವ ಗುಣ –

ಚೇತನನೇ. . . ನಮ್ಮೆಲ್ಲರ ಅಚೇತನವ ಸಚೇತನವಾಗಿಸಿದ
ವಾತ್ಸಲ್ಯ ಸುತನೇ . . . ..  ಗೋಕುಲ ಹೊಕ್ಕ ಗೋ
ಪಾಲನೇ – ಫಲಿಸಿದೆ ನಮ್ಮ ವರ್ತಮಾನದಲಿ
ವ್ಯಾಕುಲತೆ ಅಳಿಸಿ
ಹೊಮ್ಮಿಸಿದೆ ಏಸೊಂದು ರಾಧೆಯರನಿಲ್ಲಿ!!!!


-ಡಾ. ಆನಂದ್ ಋಗ್ವೇದಿ, ದಾವಣಗೆರೆ
—–