ಕರ್ನಾಟಕದ ಬಿಜೆಪಿ ಸಂಸದರಿಗೆ ಬಹಿರಂಗ ಪತ್ರ!
ಪ್ರಿಯ ಸಂಸದರೇ, ಈ ದಿನ (೦೪-೦೯-೨೦೨೩) ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ಈ ವರದಿಯು ಏಕ ಕಾಲಕ್ಕೆ ನಿಮ್ಮಗಳ ಗುಲಾಮಗಿರಿತನದ ಮನಸ್ಸನ್ನು ಹಾಗೂ ನಿಮ್ಮಂತಹವರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಜನತೆಯ ಬೌದ್ಧಿಕ ದಿವಾಳಿತನವನ್ನು ಅನಾವರಣಗೊಳಿಸಿದೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಸಲ್ಲಬೇಕಾದ ಅನುದಾನ ಸ್ಥಗಿತಗೊಂಡಿದ್ದರೂ ಸಹ ನೀವು ಈವರೆಗೆ ಈ ಕುರಿತು ಸಂಸತ್ತಿನಲ್ಲಿ ದ್ವನಿ ಎತ್ತಿದ ಉದಾಹರಣೆಗಳು ಉಂಟಾ?
ಕೇಂದ್ರ ಸರ್ಕಾರ ನೀಡುವ ಆರ್ಥಿಕ ಅನುದಾನ ಸಿದ್ಧರಾಮಯ್ಯ ಅಥವಾ ಶಿವಕುಮಾರ್ ಅವರ ಜೇಬಿಗೆ ಹೋಗುವುದಿಲ್ಲ. ಅದು ನೇರವಾಗಿ ಈ ನೆಲದ ಬಡವರಿಗೆ ಸಲ್ಲುತ್ತದೆ
ಆರೋಗ್ಯ, ವಸತಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹೀಗೆ ಹಲವು ಪ್ರಮುಖ ಕ್ಷೇತ್ರ ಗಳಿಗೆ ನೀಡಬೇಕಾಗಿರುವ ಹಣವನ್ನು ತಡೆ ಹಿಡಿಯುವುದು ಅಥವಾ ಸ್ಥಗಿತಗೊಳಿಸುವುದು ನಿಮ್ಮ ದೃಷ್ಟಿಯಲ್ಲಿ ರಾಜಕೀಯ ಲೆಕ್ಕಾಚಾರ ಇರಬಹುದು. ಆದರೆ, ಪ್ರಜ್ಞಾವಂತ ನಾಗರೀಕರ ದೃಷ್ಟಿಯಲ್ಲಿ ಇದು ಅಮಾನುಷ ಕ್ರಿಯೆ.
ಈ ಅನುದಾನದ ಪ್ರತಿ ಪೈಸೆಯೂ ಕೂಡಾ ನೀವು ಪ್ರತಿನಿಧಿಸುವ ಕ್ಷೇತ್ರಗಳ ಬಡಜನತೆಗೆ ತಲುಪುತ್ತದೆ. ಈ ಕನಿಷ್ಟ ಜ್ಞಾನ ನಿಮ್ಮಲ್ಲಿ ಇರಲಿ.
ಬಿ.ಜೆ.ಪಿ. ಸಂಸದರಾಗಿದ್ದುಕೊಂಡು, ಕರ್ನಾಟಕದ ವಿಷಯದಲ್ಲಿ ಸದಾ ಪಕ್ಷ ಭೇದ ಮರೆತು ಕರ್ನಾಟಕದ ಎಲ್ಲಾ ಸರ್ಕಾರಗಳ ಜೊತೆ ಕೈ ಜೋಡಿಸುತ್ತಿದ್ದ ದಿ.ಕೆ.ಅನಂತಕುಮಾರ್ ಅವರ ಸಂಸದೀಯ ಕಾರ್ಯ ಚಟುವಟಿಕೆಗಳನ್ನು ನೀವು ಒಮ್ಮೆ ಗಮನಿಸುವುದು ಒಳಿತು.
ನೀವು ತಿನ್ನುವ ಅನ್ನ, ಕುಡಿಯುತ್ತಿರುವ ನೀರು, ಹಾಕುತ್ತಿರುವ ಬಟ್ಟೆ, ಓಡಾಡುತ್ತಿರುವ ಕಾರು ಇವುಗಳ ಹಿಂದೆ ಕರ್ನಾಟಕದ ಜನತೆಯ ತೆರಿಗೆ ಹಣದ ಖಣವಿದೆ. ಈ ಪ್ರಜ್ಞೆ ಸದಾ ನಿಮ್ಮ ಮನಸ್ಸಿನಲ್ಲಿರಲಿ.
ಇಲ್ಲದಿದ್ದರೆ, ನಿಮಗೆ ಮುಂದಿದೆ ಮಾರಿ ಹಬ್ಬ.
-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು, ಮೈಸೂರು
—–