ಅನುದಿನ‌ ಕವನ-೯೭೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಗುರು

ಗುರು

ಅರಿಯಲಾರದ್ದನ್ನೆಲ್ಲ ಅರ್ಥೈಸಿ ಹೇಳಿದ ಗುರು ಉಳಿದರು ಎಲ್ಲರ ಮನದಲ್ಲಿ||
ಕಲಿಯಲಾರದವರನ್ನೆಲ್ಲ ಕಲಿಕೆಗೆ ತಂದ ಗುರು ಉಳಿದರು ಎಲ್ಲರ ಮನದಲ್ಲಿ||

ಇಂದಿಗೂ ಅಳಿಯದೇ ಉಳಿದಿವೆ ಮೇಲು ಕೀಳು ಎಂಬ ವಿಷಕಾರುವ ಮನಗಳು|
ಬಡವ ಬಲ್ಲಿದರೆಂದು ಭೇದ ಮಾಡದ ಗುರು ಉಳಿದರು ಎಲ್ಲರ ಮನದಲ್ಲಿ||

ಹೆತ್ತವರೇ ಕೈಚೆಲ್ಲಿರುವರು ಅಪರಾಧಗಳ ಅಡಿಪಾಯ ಗಟ್ಟಿಯಾಗಿರುವುದ ಕಂಡು|
ತಪ್ಪುಗಳನ್ನು ತಿದ್ದಿ ತೀಡಿ ಬುದ್ಧಿ ಕಲಿಸಿದ ಗುರು ಉಳಿದರು ಎಲ್ಲರ ಮನದಲ್ಲಿ||

ಓದು ಬರಹ ಬಾರದವನ ತುಳಿದು ಬದುಕುತ್ತಿರುವ ಲೋಕವಿದು|
ಶಿಕ್ಷಣವನ್ನೇ ಶಕ್ತಿಯನ್ನಾಗಿಸಿದ ಗುರು ಉಳಿದರು ಎಲ್ಲರ ಮನದಲ್ಲಿ||

‘ಗಟ್ಟಿಸುತ’ ಎಲ್ಲವನ್ನು ಮೆಟ್ಟಿ ನಿಂತು ಸದೃಢ ಸಮಾಜ ಕಟ್ಟುವುದು ಅನಿವಾರ್ಯ|
ಶಿಷ್ಯರ ಬಾಳಿಗೆ ದಾರಿ ತೋರಿದ ಗುರು ಉಳಿದರು ಎಲ್ಲರ ಮನದಲ್ಲಿ||

-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ
—–