ಸೆ.5 ಪ್ರತಿವರ್ಷದಂತೆಯೇ, ಪ್ರತಿ ವರ್ಷಾಚರಣೆಯಂತೆಯೇ ” ಶಿಕ್ಷಕರ ದಿನಾಚರಣೆ “. ಗುರುಬ್ರಹ್ಮ, ಗುರುವಿಷ್ಣು……….. ಎಂದು ಒಂದುದಿನ ಮಾತ್ರ ಹಾಡಿ ಹೊಗಳುವ ದಿನ. ನಗು ಬರುತ್ತಿದೆ ನನಗೆ.
ಒಂದು ಅದ್ದೂರಿ ಸಮಾರಂಭ, ಅತಿಥಿ ಅಭ್ಯಾಗತರು, ಒಂದಷ್ಟು ಸನ್ಮಾನಗಳು, ಒಂದೊಳ್ಳೆಯ ಊಟ ಅಲ್ಲಿಗೆ ಶಿಕ್ಷಕರ ದಿನಾಚರಣೆ ಮುಗಿಯಿತು ಎಂದು ನಮ್ಮ ಶಿಕ್ಷಕರೆಲ್ಲ ಮತ್ತೆ ಮರಳಿ ಗೂಡಿಗೆ ಸೇರುವ ಒಂದು ದಿನ. ನಮ್ಮ ಶಿಕ್ಷಕರೂ ಅಲ್ಲಿಗೇ ಅಷ್ಟಕ್ಕೇ ತೃಪ್ತ.
ಸೆ.5ರಂದು ಒಂದು ದಿನ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಎಲ್ಲರೂ ಶಿಕ್ಷಕರನ್ನು ಆಕಾಶದೆತ್ತರ ಒಯ್ಯುತ್ತಾರೆ. “ನಿಮ್ಮಿಂದಲೇ ನಾವು” ಎಂದು ಹೊಗಳಿ ಹೊಗಳಿ ಹೊನ್ನಶೂಲಕ್ಕೇ ಏರಿಸಿಬಿಡುತ್ತಾರೆ. ನಮ್ಮ ಶಿಕ್ಷಕರೋ ಅವರಾಡುವ ಮಾತುಗಳೆಲ್ಲ ನಿಜವೆಂದೇ ಭ್ರಮಿಸಿಬಿಡುತ್ತಾರೆ. ಇದೇ ದೊಡ್ಡ ದುರಂತ.
ಶಿಕ್ಷಕರ ದಿನಾಚರಣೆಯ ಮರುದಿನವೇ ಹೊಗಳಿದವರೆಲ್ಲ ಯಾವುದೂ ಏನೂ ಆಗೇ ಇಲ್ಲ ಎನ್ನುವಂತೆಯೇ ಶಿಕ್ಷಕರನ್ನು ತಮ್ಮ ಅಧೀನದಲ್ಲಿರುವ ಸೂತ್ರದ ಗೊಂಬೆಗಳು ಎನ್ನುವಂತೆಯೇ ನಡೆಸಿಕೊಳ್ಳುತ್ತಾರೆ.
ಹಾಗೆ ನೋಡಿದರೆ ಉಳಿದೆಲ್ಲ ಇಲಾಖೆಗಳಿಗಿಂತ ಶಿಕ್ಷಕರನ್ನು ಸಮಾಜ ಅತ್ಯಂತ ಸೂಕ್ಷ್ಮ ಕಣ್ಣಿನಿಂದ ನೋಡುತ್ತದೆ ಅಲ್ಲದೆ ಶಿಕ್ಷಕನಾದವನು ಹೀಗೇ ಇರಬೇಕೆಂಬ ಒಂದಷ್ಟು ಅಲಿಖಿತ ನಿಯಮಗಳಿವೆ. ಉಳಿದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ. ಅದನ್ನು ಅರಿಯಲಾರದವರು ಏನೇನೋ ಎಡವಟ್ಟುಗಳನ್ನು ಮಾಡಿಕೊಂಡುಬಿಡುತ್ತಾರೆ ಆ ಮಾತು ಬೇರೆ.
ನಿಜ ಈಗ ಖಾಯಂಗೊಂಡ ಶಿಕ್ಷಕರಿಗೆ ಉತ್ತಮ ವೇತನ ಸೌಲಭ್ಯವಿದೆ. ಆದರೆ ನಾಳಿನ ನಾಗರಿಕರನ್ನು ಸಿದ್ಧಪಡಿಸುವ ಶಿಕ್ಷಕನಿಗೆ ನಿಜವಾಗಿಯೂ ದೊರೆಯಬೇಕಾದ ಗೌರವ ದೊರೆಯುತ್ತಿದೆಯೇ ? ಇಲ್ಲ. ಯಾವುದೇ ಕಚೇರಿಗೆ ಹೋದರೂ ಗೌರವ ಇರಲಿ ಕೂಡಿರಿ ಎಂಬ ಸೌಜನ್ಯವೂ ಶಿಕ್ಷಕರ ಬಗ್ಗೆ ಕಾಣಿಸುವುದಿಲ್ಲ. ’ನಾನೊಬ್ಬ ಮೇಷ್ಟ್ರು’ ಎಂದು ಹೇಳಿ ನೋಡಿ ಅಧಿಕಾರಿಶಾಹಿಗಳು ವರ್ತಿಸುವ ಬಗೆಯೇ ಬೇರೆ ಆಗಿಬಿಡುತ್ತದೆ.
ಕೆಲವು ವರ್ಷಗಳ ಹಿಂದೆ ಸ್ವತ: ನಾನೇ ಅನುಭವಿಸಿದಂತೆ ಪರೀಕ್ಷಾ ಕಾರ್ಯಕ್ಕೆ ಬೇರೆ ಊರಿಗೆ ಹೋದಾಗ ಅಲ್ಲಿನ ಪ್ರವಾಸಿ ಮಂದಿರದಲ್ಲಿ ಕೊಠಡಿ ಕೇಳಲು ಅಲ್ಲಿಯ ಅಧಿಕಾರಿಗಳ ಬಳಿ ಹೋಗಿದ್ದೆವು. ಅವರೆಂದ ಮಾತು ನಿಜಕ್ಕೂ ಸತ್ಯ. ಅದು ಇಡೀ ವ್ಯವಸ್ಥೆಯೇ ಮಾತನಾಡಿದಂತಿತ್ತು. ’ಸರ್ ನಿಮ್ಮ ಶಿಕ್ಷಕ ವೃತ್ತಿಯ ಬಗ್ಗೆ ನನಗೆ ಅನುಕಂಪ, ಕರುಣೆ ಎಲ್ಲ ಮೂಡುತ್ತದೆ. ನಿಮ್ಮದು ಥ್ಯಾಂಕ್ ಲೆಸ್ ಜಾಬ್, ಅಧಿಕಾರ, ಶಿಫಾರಸ್ಸು, ಗತ್ತುಗೈರತ್ತುಗಳಿಲ್ಲದ ವೃತ್ತಿ. ಹೀಗಾಗಿ ನಿಮ್ಮ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಿಜವಾಗಿಯೂ ನಿಮ್ಮ ಬಗ್ಗೆ ಅನುಕಂಪ ಮೂಡುತ್ತದೆ, ನಿಮ್ಮ ಸ್ಥಾನದಲ್ಲಿ ಬೇರೆ ಇಲಾಖೆಯ ಯಾರೇ ಬಂದರೂ ಇಲ್ಲಿ ತಕ್ಷಣ ವ್ಯವಸ್ಥೆ ಆಗುತ್ತದೆ. ಆದರೆ ನಿಮಗಿಲ್ಲ ಅದೇ ದೊಡ್ದ ದುರಂತ’ ಎಂದು ಹೇಳಿದರು. ನಿಜ ಅವರಾಡಿದ ಮಾತು ಅಕ್ಷರಶ: ಸತ್ಯ. ಬೇರೆ ಇಲಾಖೆಯ ಯಾರೇ ಹೋದರೂ ಅಲ್ಲಿ ಗೌರವವಿದೆ, ಸೌಲಭ್ಯಗಳಿವೆ. ಆದರೆ ಶಿಕ್ಷಕರಿಗಿಲ್ಲ.
ಹೋಗಲಿ ಅದೊಂದು ಕಡೆ ಇರಲಿ. ಸಮಾಜದ ಎಲ್ಲರಿಗೂ ಸಾಮಾನ್ಯವಾಗಿ ಶಿಕ್ಷಕರ ಬಗ್ಗೆ ಗೊತ್ತಿರುವುದೆಂದರೆ
1. ಶಿಕ್ಷಕರ ಕೆಲಸವೆಂದರೆ ಆರಾಮದಾಯಕ ಕೆಲಸ. ಬಹಳ ಕಷ್ಟಗಳೇನಿಲ್ಲ.
2. ಸಿಕ್ಕಾಪಟ್ಟೇ ಸಂಬಳವಿದೆ. ಹೀಗಾಗಿ ಸಮಾಜದಲ್ಲಿ ಉಳಿದೆಲ್ಲರಿಗಿಂತ ನೆಮ್ಮದಿಯಾಗಿರುವ ವ್ಯಕ್ತಿಯೆಂದರೆ ಶಿಕ್ಷಕನೊಬ್ಬನೇ
3. ಉಳಿದೆಲ್ಲ ಇಲಾಖೆಗಳಿಗಿಂತ ಶಿಕ್ಷಕರಿಗೆ ಸಿಕ್ಕಾಪಟ್ಟೆ ರಜೆಗಳಿವೆ. ರಜೆಯ ಅವಧಿಯಲ್ಲೂ ಪಾಠ ಮಾಡದೇ ಸಂಬಳ ಪಡೆಯುತ್ತಾರೆ.
4. ಮಕ್ಕಳಿಗೆ ನಾಲ್ಕಕ್ಷರ ಹೇಳಿಕೊಟ್ಟುಬಿಟ್ಟರೆ ಸಾಕು ಶಿಕ್ಷಕರದು ಬೇರೇನೂ ಕೆಲಸವಿಲ್ಲ, ಉಳಿದಂತೆ ಬೇರೆ ಕೆಲಸಗಳನ್ನು ಮಾಡಿಕೊಂಡು ಆರಾಮವಾಗಿರುತ್ತಾರೆ.
5. ಹೆಚ್ಚಿಗೆ ಸಂಬಳವಿದ್ದೂ ಸದಾ ” ಇನ್ನೂ ಸಂಬಳ ಸಂಬಳ ಬೇಕು ” ಎಂದು ಯಾವಾಗಲೂ ಬಡಿದಾಡುತ್ತಿರುತ್ತಾರೆ.
6. ಮಕ್ಕಳಿಗೆ ಸರಿಯಾದ ದಾರಿಗೆ ತರದ ಶಿಕ್ಷಕ ಶಿಕ್ಷಕನೇ ಅಲ್ಲ.
7. ಸರ್ಕಾರದಿಂದ ಬೇಕಾದಷ್ಟು ಸೌಲಭ್ಯಗಳಿವೆ, ಅವುಗಳಲ್ಲೇ ಶಿಕ್ಷಕರು ಸಾಕಷ್ಟು ಹೊಡೆಯುತ್ತಾರೆ.
ಹೀಗೆ ಸಮಾಜದಲ್ಲಿ ಸಾಮಾನ್ಯವಾಗಿ ಜನರು ಶಿಕ್ಷಕರನ್ನು ಕಾಣುವ ರೀತಿಯಿದು. ಆದರೆ ನಿಜವಾಗಿಯೂ ಶಿಕ್ಷಕನ ಬವಣೆಯೇನು ? ಎಂಬುದು ಅದನ್ನು ಅನುಭವಿಸಿದವರಿಗೇ ಗೊತ್ತು.
1.ಕೆಲವು ಕಡ್ಡಾಯದ ಸಂದರ್ಭಗಳಲ್ಲಿ ಉಳಿದ ಇಲಾಖೆಗಳ ಸಾಮಾನ್ಯ ಸಿಬ್ಬಂದಿಯವರೂ ಸಹ ಶಿಕ್ಷಕರನ್ನು ಕಾಣುವ, ಬಳಸಿಕೊಳ್ಳುವ ರೀತಿ ನೋಡಿದರೆ, ಯಾರಿಗೂ ಈ ವೃತ್ತಿ ಬೇಡವೆನಿಸುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಶಿಕ್ಷಕರನ್ನು ಅಷ್ಟೊಂದು ತುಚ್ಛವಾಗಿ ಕಾಣುವಂತಿದ್ದರೆ ಶಿಕ್ಷಕರ ದಿನಾಚರೆಯ ದಿನ ಹೊಗಳುವ ನಾಟಕಗಳೇಕೆ ?
2. ಶಿಕ್ಷಕರಿಗೆ ಈಗ ಮೊದಲಿಗಿಂತಲೂ ಕೆಲಸದ ಒತ್ತಡಗಳು ಹೆಚ್ಚೇ ಆಗಿವೆ. ಕೆಲವರು ಅವುಗಳಿಂದ ತಪ್ಪಿಸಿಕೊಳ್ಳುವ ಜಾಣ್ಮೆಯನ್ನು ಹೊಂದಿದ್ದಾರಾದರೂ ಅವರ ಸಂಖ್ಯೆ ಬೆರಳೆಣಿಕೆಯಷ್ಟು.
3. ಶಿಕ್ಷಕರಿಗೆ ಒಳ್ಳೆಯ ವೇತನ ಇತರೆ ಸೌಲಭ್ಯಗಳಿವೆ ನಿಜ ಆದರೆ, ಅವುಗಳನ್ನು ಪಡೆಯಲು ಶಿಕ್ಷಕರು ಏನೆಲ್ಲ ಪಡಿಪಾಟಲು ಪಡಬೇಕೆಂಬುದು ಶಿಕ್ಷಕರ ಅಂತರಂಗಕ್ಕೆ ಮಾತ್ರ ಗೊತ್ತಿರುವ ವಿಷಯ.
4. ಈಗೀಗ ಇಲಾಖೆಗಳಿಗೆ ಶಿಕ್ಷಕರ ರಜೆಯ ಮೇಲೇ ಕಣ್ಣಿರುವುದರಿಂದ ರಜಾ ರಹಿತ ಕಾರ್ಯಗಳನ್ನೇ ಹೆಚ್ಚೆಚ್ಚು ಹೇರಲಾಗುತ್ತಿದೆ. ಶಿಕ್ಷಕರಿಗೆ ರಜೆ ಏಕೆ ? ಎಂಬುದನ್ನು ಯಾರೂ ಯೋಚಿಸುತ್ತಿಲ್ಲ. ಪಾಠ ಮಾಡುವ ಶಿಕ್ಷಕನ ಮನಸು, ಬುದ್ಧಿ ಶಾಂತವಾಗಿದ್ದರೆ ಮಾತ್ರ ಉತ್ತಮ ಬೋಧನೆ ಮಾಡಬಲ್ಲ ಎಂಬ ಕಾರಣಕ್ಕಾಗಿ ರಜೆಗಳಿರುತ್ತವೆಯೇ ಹೊರತು ಬೇರಾವ ಕಾರಣವೂ ಅಲ್ಲ.
5. ಮಕ್ಕಳಿಗೆ ನಾಲ್ಕಕ್ಷರ ಹೇಳಿಕೊಡುವುದು ಅಷ್ಟು ಸುಲಭದ ಕಾರ್ಯವಲ್ಲ. ಅವರನ್ನು ತಿದ್ದಿ ತೀಡಿ ಒಂದು ಹಂತಕ್ಕೆ ತರಲು ಪ್ರತಿ ಶಿಕ್ಷಕನೂ ಶಕ್ತಿ ಮೀರಿ ಕಾರ್ಯ ನಿರ್ವಹಿಸಿರುತ್ತಾರೆ. ಇದು ಯಾರ ಕಣ್ಣಿಗೂ ಕಾಣುವುದಿಲ್ಲ.
6. ಮಕ್ಕಳನ್ನು ಸರಿಯಾದ ದಾರಿಗೆ ತರುವುದು ಶಿಕ್ಷಕನದಷ್ಟೇ ಅಲ್ಲ ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯೂ ಹೌದು ಎಂಬುದನ್ನು ಪಾಲಕರು ಮರೆತೇಬಿಟ್ಟಿರುತ್ತಾರೆ.
7. ಯಾರೋ ಮಾಡಿದ ತಪ್ಪಿಗೆ ಯಾರ ತಲೆಗೋ ಕಟ್ಟುವ ದಿನಮಾನಗಳಿವೆ. ಹೀಗಾಗಿ ತಪ್ಪು ಮಾಡದ ಶಿಕ್ಷಕರೂ ಆರೋಪಗಳನ್ನು ಎದುರಿಸಬೇಕಾಗುತ್ತದೆ.
8. ಮಕ್ಕಳನ್ನು ಹೊಡೆಯುವಂತಿಲ್ಲ, ಬೈಯುವಂತಿಲ್ಲ, ಅನುತ್ತೀರ್ಣಗೊಳಿಸುವಂತಿಲ್ಲ ಹೀಗೆ ನೂರೆಂಟು ನಿಯಮಾವಳಿಗಳ ಮಧ್ಯೆಯೂ ಶಿಕ್ಷಕ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುವುದು ನಿಜಕ್ಕೂ ಕಷ್ಟಕರ.
ಶಿಕ್ಷಕ ವೃತ್ತಿ ಸೇವಾ ಮನೋಭಾವನೆಯನ್ನು ಬಯಸುವ ವೃತ್ತಿ. ದುರಂತವೆಂದರೆ ಅತಿಹೆಚ್ಚು ಅಂಕ ಪಡೆದವರೆಲ್ಲ ಡಾಕ್ಟರೋ, ಇಂಜಿನಿಯರ್ ಗಳೋ ಆಗುವಾಗ, ಶಿಕ್ಷಕರೇ ಆಗಬೇಕೆಂದು ಬಯಸಿ ಬರುವವರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು.
ಸಮಾಜಕ್ಕೆ ಉತ್ತಮ ಡಾಕ್ಟರ್ ಬೇಕು, ಇಂಜಿನಿಯರ್ ಬೇಕು, ವಕೀಲರು ಬೇಕು, ಅಧಿಕಾರಿಗಳು ಬೇಕು ಎಲ್ಲವೂ ಬೇಕು ಆದರೆ ಶಿಕ್ಷಕರಾಗುವುದು ಬೇಡ. ಯಾಕೆಂದರೆ ಅದು ಎಲ್ಲಕ್ಕಿಂತ ಕನಿಷ್ಟ ಉದ್ಯೋಗ ಹಾಗೂ ಯಾವುದೇ ಲಂಚವಿಲ್ಲದ, ಶಿಫಾರಸುಗಳೇ ಇಲ್ಲದ, ಯಾವ ಇಲಾಖೆಯಲ್ಲೂ ಯಾರೂ ಮಾತು ಕೇಳದ ವೃತ್ತಿಯೆಂದು ಸಮಾಜ ನಿರ್ಧರಿಸಿಬಿಟ್ಟಿದೆ. ಹೀಗಾಗಿಯೇ ಶಿಕ್ಷಕರೆಂದರೆ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಸಿದ್ಧಪಡಿಸಿಕೊಡುವ ಒಂದು ಯಂತ್ರವಿದ್ದಂತೆ, ಶಾಲೆ ಕಾಲೇಜುಗಳು ಕಾರ್ಖಾನೆಗಳಿದ್ದಂತೆ ಅಷ್ಟೆ. ಶಿಕ್ಷಕರ ಯಾವ ಭಾವನೆಗಳಿಗೂ ಬೆಲೆಯಿಲ್ಲ.
ಸೇವಾ ಮನೋಭಾವನೆಯಿಂದ, ಉತ್ತಮ ಸಮಾಜವನ್ನು ನಿರ್ಮಿಸಬೇಕೆಂಬ ಮಹದಾಸೆ ಹೊತ್ತು ಬಂದು ಆ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವವರೂ ಇದ್ದಾರೆ. ಇವರೆಲ್ಲ ಎಲೆಯ ಮರೆಯ ಕಾಯಿಯಂತೆ ಯಾವ ಪ್ರಶಸ್ತಿ, ಗೌರವ, ಸನ್ಮಾನಗಳನ್ನೂ ಬಯಸದೇ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಸೇವೆ ಸಲ್ಲಿಸುತ್ತಿದ್ದಾರೆ.
ಅಂತಹ ಎಲ್ಲ ಮಹನೀಯ ಶಿಕ್ಷಕರಿಗೆ ನನ್ನದೊಂದು ಸಲಾಂ.
ಹಾಗೆ ನೋಡಿದರೆ ಇವತ್ತು ಸಮಾಜದ ವಿವಿಧ ಇಲಾಖೆಗಳಲ್ಲಿ, ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರೆಲ್ಲರೂ ಶಿಕ್ಷಕರ ಕೈಯಲ್ಲಿ ಕಲಿತು ಆ ಹುದ್ದೆಗಳಿಗೆ ಹೋದವರೇ. ಆದರೆ ಅವರು ಶಿಕ್ಶಕರ ಬಗ್ಗೆ ತಳೆದಿರುವ ಧೋರಣೆ, ನಡೆಸಿಕೊಳ್ಳುವ ರೀತಿ ಮಾತ್ರ ನಿಜಕ್ಕೂ ಶೋಚನೀಯ. ಎಲ್ಲಿ ಶಿಕ್ಷಕರ ಬಗ್ಗೆ ಉತ್ತಮ ಧೋರಣೆ, ಗೌರವಗಳಿಲ್ಲವೋ ಅದು ನಿಜಕ್ಕೂ ನೈತಿಕತೆ ಪಾತಾಳ ಕಂಡಿರುವ ಸಮಾಜ ಎಂದೇ ಹೇಳಬಹುದು.
ಅಂತೆಯೇ ಶಿಕ್ಷಕರಾದ ನಾವೆಲ್ಲ ನಿಜವಾಗಿಯೂ ನಮಗೆ ಸಿಗಬೇಕಾದ ಗೌರವ ಸಿಗುತ್ತಿದೆಯೇ ? ಎಂದು ಪ್ರಾಮಾಣಿಕವಾಗಿ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ.
-ಸಿದ್ಧರಾಮ ಕೂಡ್ಲಿಗಿ, ಪ್ರಾಚಾರ್ಯರು, ಪಿಯು ಕಾಲೇಜ್, ಕೂಡ್ಲಿಗಿ
—–