ಅನುದಿನ‌ ಕವನ-೯೭೮, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಶಿಕ್ಷಕನ ಆತಂಕ!

ಶಿಕ್ಷಕನ ಆತಂಕ!

ವರ್ಗದೊಳಗೆ
ವರ್ಣಭೇದವಿರುವಾಗ
ಪೂರ್ಣತೆಯನ್ಹೇಗೆ ವರ್ಣಿಸಲಿ?

ಮೂರ್ತವನ್ನಷ್ಟೇ
ಅರಗಿಸಿಕೊಳ್ಳುವವರಿಗೆ
ಅಮೂರ್ತವನ್ಹೇಗೆ ಅರ್ಥೈಸಲಿ?

ಸುರಕ್ಷತೆಯನ್ನರಸಿ
ಬಂದಿರುವವರ ಮುಂದೆ
ಹೋರಾಟವನ್ಹೇಗೆ ಚಿತ್ರಿಸಲಿ?

ಮಿಥ್ಯವನ್ನಷ್ಟೇ
ಒಪ್ಪಿಕೊಂಡವರೆದಿರು
ಸತ್ಯದ ಪಾಠವನ್ಹೇಗೆ ಮಾಡಲಿ?

ಒಡೆಯುವ
ವಾರಸುದಾರರಿಗೆ
ಕಟ್ಟುವದನ್ಹೇಗೆ ಕಟ್ಟಿಕೊಡಲಿ?

ಚಾಡಿಯ
ಬುತ್ತಿ ತಂದವರಿಗೆ
ಎದೆಯ ಹಾಡನ್ಹೇಗೆ ಉಣಿಸಲಿ?

ತುಂಡುಧ್ವಜ
ಹಿಡಿದವರ ಕೈಗೆ
ಅಖಂಡತೆಯನ್ಹೇಗೆ ದಾಟಿಸಲಿ?


-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ
—–