ಕಲಬುರಗಿ ಪತ್ರಕರ್ತ ಕಲ್ಲೂರಿನ ಕ್ಯಾದಿಗೇರಿ ನಾಗಿರೆಡ್ಡಿಯ ( ಕೆ.ಎನ್. ರೆಡ್ಡಿ) ಅಕಾಲಿಕ ಸಾವಿಗೆ ಸಾಹಿತಿ ಸಿದ್ದು ಯಾಪಲಪರವಿ ಕಂಬನಿ

ಧಾರವಾಡ ಕರ್ನಾಟಕ ಕಾಲೇಜಿನ ಗೆಳೆಯ, ಹಿರಿಯ ಇಂಗ್ಲಿಷ್ ಪತ್ರಕರ್ತ ಕೆ.ಎನ್. ರೆಡ್ಡಿ ಬದುಕು ದಾರುಣ ಅಂತ್ಯ ಕಂಡಿದೆ. ಸದಾಕಾಲ ಅಂತರ್ಮುಖಿಯಾಗಿರುತ್ತಿದ್ದ ರೆಡ್ಡಿಯ ಮಾತು ಕಡಿಮೆ, ಕೆಲಸ ಹೆಚ್ಚು. ಅಗತ್ಯಕ್ಕಿಂತ ಹೆಚ್ಚು ಸೂಕ್ಷ್ಮ.

ವಿಧಾನಸೌಧ ಸುತ್ತು ಹಾಕುವಾಗ ಅನೇಕ ಘಟಾನುಘಟಿಗಳ ಸಂಪರ್ಕವನ್ನು ತಲೆಗೆ ಏರಿಸಿಕೊಳ್ಳದ ಪ್ರಾಮಾಣಿಕತೆ. ಅನೇಕ ಆರ್ಥಿಕ ಸಂಕಷ್ಟಗಳ ಮಧ್ಯೆ ಬದುಕು ಕಟ್ಟಿಕೊಂಡು ಕಲಬುರ್ಗಿಯಲ್ಲಿ ನೆಲೆಗೊಂಡಿದ್ದ.

ಅವನ ಪರಿಸರ ಪ್ರೇಮದ ಕಾರಣದಿಂದ ಒಂದು ಪರಿಸರ ಸ್ನೇಹಿ ಶಾಲೆ ಆರಂಭಿಸಿದ ಹುಚ್ಚು ಪ್ಯಾಶನ್ ಅವನ ಸಾವಿಗೆ ಮೂಲ ಕಾರಣ. ಈ ಕುರಿತು ನನ್ನೊಂದಿಗೆ ಅನೇಕ ಬಾರಿ ಚರ್ಚೆ ಮಾಡಿದ್ದ ಕೂಡ. ಈ ವಿನೂತನ ಹುಚ್ಚಿಗೆ ರಾಯಚೂರು ಸೂಕ್ತ ಸ್ಥಳವಲ್ಲ ಎಂಬ ಅಭಿಪ್ರಾಯದ ನಡುವೆ ಶಾಲೆ ಆರಂಭಿಸಿ ವಿಫಲನಾಗಿದ್ದ. ಆದರೆ ಈ ಕುರಿತು ನಂತರ ಮಾತನಾಡಲೇ ಇಲ್ಲ.

ಅವನಿಗೆ ಜೆ.ಎಚ್. ಪಟೇಲರ ಬಗ್ಗೆ ಅಪಾರ ಗೌರವ. ಅವರ ಕುರಿತು ಸುದೀರ್ಘ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸ್ವಂತ ಹಣ ಹಾಕಿದ್ದ. ಆದರೆ ಅದನ್ನು ಜನರಿಗೆ ತಲುಪಿಸುವ ಮಾರುಕಟ್ಟೆಯ ತಂತ್ರ ಅವನಿಗೆ ಕೊನೆ ತನಕ ತಿಳಿಯಲೇ ಇಲ್ಲ. ಒಂದು YouTube ಚಾನಲ್ ಮಾಡು ಎಂಬ ಮಾತನ್ನು ಲೆಕ್ಕಸದೇ ಮತ್ತೆ, ಮತ್ತೆ ಹೊಸ ಸಾಹಸಗಳಿಗೆ ಕೈ ಹಾಕಿದ. ಇಂತಹ ಸಾಹಸ ತಪ್ಪಲ್ಲ. ನಮ್ಮ ಪ್ಯಾಶನ್ ಮತ್ತು ಹುಚ್ಚುಗಳಿಗೆ ಕಾಲ ಸಾತ್ ಕೊಡದೆ ಇದ್ದರೆ ಬದುಕು ನರಕವಾಗುವ ವಾಸ್ತವ ನಮಗೆ ಗೊತ್ತಿರಬೇಕು.

ರೆಡ್ಡಿ ಕೇವಲ ಜರ್ನಲಿಸ್ಟ್ ಆಗಿದ್ದರೆ ಖಂಡಿತ ನಮ್ಮೊಡನೆ ಇರುತ್ತಿದ್ದನೇನೋ ಎಂಬ ಭ್ರಮೆ. ಅವನು ಶಿಕ್ಷಣ ಮತ್ತು ಸಾಕ್ಷ್ಯಚಿತ್ರ ಲೋಕಕ್ಕೆ ಪ್ರವೇಶ ಮಾಡುವ ಮುನ್ನ, ಅಗತ್ಯವಿರುವ ಫಂಡ್ ಸಂಗ್ರಹಿಸುವ ವ್ಯವಹಾರ ಜ್ಞಾನ ರೂಪಿಸಿಕೊಳ್ಳಬೇಕಿತ್ತು. ರೆಡ್ಡಿಗೆ ಆ ಚಾಣಾಕ್ಷತನ ಇರಲಿಲ್ಲ.

ಪಟೇಲರ ಸ್ಮರಣೆಯ ಕಾರ್ಯಕ್ರಮ ಗದುಗಿನಲ್ಲಿ ಆಯೋಜನೆ ಮಾಡಿದಾಗ ಅವನನ್ನು ಆಹ್ವಾನಿಸಿ ಗೌರವಿಸಲಾಯಿತು. ಮಹಿಮಾ ಪಟೇಲ್, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ಹಿರಿಯ ನಾಯಕರಾದ ಮಾನ್ಯ ಬಸವರಾಜ ಹೊರಟ್ಟಿ ಹಾಗೂ ಅನೇಕರು ರೆಡ್ಡಿಯ ಪ್ರಾಮಾಣಿಕತೆಯನ್ನು ಹೊಗಳಿದ್ದರು.

ಅದೇ ಸಮಯದಲ್ಲಿ ಅವನ ಶಾಲೆಯ ಕನಸನ್ನು ತೋಡಿಕೊಂಡಾಗ, ನನ್ನ ಅನೇಕ ಹುಚ್ಚಾಟಗಳ ವಿಫಲತೆ ಮತ್ತು ಆರ್ಥಿಕ ಸಂಕಷ್ಟಗಳ ಪಡಿಪಾಟಲನ್ನು ರೆಡ್ಡಿಗೆ ವಿವರಿಸಿದ್ದೆ. ಕೆಲದಿನಗಳ ನಂತರ ಕಲಬುರ್ಗಿ ಕಾರ್ಯಕ್ರಮದಲ್ಲಿ ಒಂದು ಭೇಟಿ, ನಂತರ ಒಂದೆರಡು ಬಾರಿ ಮಾತನಾಡಿ ನಂತರ ಮಾಯವಾಗಿದ್ದ.

ಪತ್ರಿಕೋದ್ಯಮದ ಕೆಲಸ ಬಿಡಬಾರದಿತ್ತು ಎಂಬ ನೋವು ಅವನನ್ನು ಕಾಡಲಾರಂಭಿಸಿತು. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಪ್ರಬುದ್ಧತೆಯ ಜೊತೆಗೆ ಅಚಲ ನಿಷ್ಠೆ ಮತ್ತು ಪ್ರಾಮಾಣಿಕತೆ ಅವನ ಶಕ್ತಿ. ವ್ಯವಹಾರ ಜ್ಞಾನದ ಕೊರತೆ ಅವನ ಮಿತಿ.
ಸೂಕ್ಷ್ಮ ಜೀವಿ, ಪ್ರಾಮಾಣಿಕ ರೆಡ್ಡಿಗೆ ಆತ್ಮಹತ್ಯೆ ಮಹಾಪಾಪ ಎಂಬ ಅರಿವು ಇರಬೇಕಿತ್ತು. ಅವನ ಮಗಳು ಮತ್ತು ನಮ್ಮಂತಹ ಗೌರವಿಸುವ ಗೆಳೆಯರನ್ನು ಒಮ್ಮೆ ನೆನಪಿಸಿಕೊಂಡು ಸಾವಿರ ನೋವುಗಳನ್ನು ಅವನು ಸಹಿಸಿಕೊಳ್ಳಲೇಬೇಕಿತ್ತು.‌

ಪ್ರಾಮಾಣಿಕರಿಗೆ ಹಿಂಸೆ, ಅಪಮಾನ, ನೋವು ಉಂಟು ಮಾಡುವ ವ್ಯಾವಹಾರಿಕ ಜಗತ್ತಿನಲ್ಲಿ ನಾವಿದ್ದೇವೆ. ಅಕ್ಷರ ಹಾದರ ಯಥೇಚ್ಛವಾಗಿ ಸಾಗಿ, ದುಡ್ಡು ಮಾಡುವ ಜನರನ್ನು ಕಂಡು ರೋಸಿ ಹೋಗುವ ಹೊತ್ತಿನಲ್ಲಿ ಪ್ರಾಮಾಣಿಕ ಮನೋಧರ್ಮದ ರೆಡ್ಡಿ ನಮಗೆ ಭರವಸೆಯ ಬೆಳಕಾಗಿದ್ದ. ಈಗ ಕೇಡುಗಾಲ ಎಂಬಂತೆ ಆ ಬೆಳಕು, ಕ್ರೂರ ಅಂತ್ಯ ಕಂಡು ನಂದಿ ಹೋಗಿದೆ.
ನಾನು ನಿನ್ನ ಈ ಪಾಪದ ನಿರ್ಣಯವನ್ನು ಎಂದಿಗೂ ಕ್ಷಮಿಸಲಾರೆ.

-ಸಿದ್ದು ಯಾಪಲಪರವಿ, ಗದಗ