ಅನುದಿನ ಕವನ-೯೮೩, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ನಿರೀಕ್ಷೆ ಜಾರಿಯಲ್ಲಿದೆ….

ನಿರೀಕ್ಷೆ ಜಾರಿಯಲ್ಲಿದೆ….

ಈಗೀಗ ಎಲ್ಲದಕ್ಕೂ
ಮೌನ ಬೇಲಿಯ ಲಗಾಮು

ನೇರ ಎದೆಗೇ ನುಗ್ಗುವ
ಮಾತಿನ ಈಟಿಗಳು
ಮರಾಮೋಸದ ಮರೆಯಲ್ಲಿ
ಹೆಣೆದುಕೊಳ್ಳುವ ಕುತಂತ್ರದ ಜಾಲಗಳು
ಹೊಂಚಿ ಕೂತ ಗುಳ್ಳೆ ನರಿಯ
ವಂಚನೆಯ ಮಿಂಚುಗಳು
ಎಲ್ಲಕ್ಕೂ ಕಿರುನಗೆಯೇ ಉತ್ತರ

ಅಂದ ಹಾಗೆ….
ಎಲ್ಲದಕ್ಕೂ ಉತ್ತರಿಸಲೇಬೇಕೆಂದೇನಿಲ್ಲ
ದಿವ್ಯ ನಿರ್ಲಕ್ಷ್ಯವೂ ಹೇಳಬೇಕೆನಿಸಿದ್ದನ್ನು
ದಾಟಿಸಿಬಿಡುತ್ತದೆ

ಒಳ್ಳೆಯದೆಲ್ಲ ಉಳಿಯುತ್ತದೆ ಎಂದಾದರೆ
ಕೆಡುಕಿಗೆ ಕೊನೆಗಾಲ ಕಟ್ಟಿಟ್ಟ ಬುತ್ತಿ
ಮುಖವಾಡಗಳು ಅದೆಷ್ಟು ದಿನ
ಉಸಿರಾಡುತ್ತವೆ? ನೀವೇ ಹೇಳಿ….

ಇಷ್ಟರಲ್ಲೇ ಕಾರ್ಮೋಡಗಳು
ಹನಿದು ಇಳೆ ತಣಿಯುತ್ತದೆ
ಎದೆಭಾರ ಇಳಿದು ನಿರುಮ್ಮಳ
ಕಣ್ಣ ಕೊನೆಗೆ ಮತ್ತೆ ಚಿಗುರುವ ಕನಸ ಬಳ್ಳಿ
ನಿರೀಕ್ಷೆ ಜಾರಿಯಲ್ಲಿದೆ‌‌‌….!

-ನಾಗೇಶ್ ಜೆ. ನಾಯಕ, ಸವದತ್ತಿ

—–