ನಿರೀಕ್ಷೆ
ಖಾಲಿ ತೂಗುಯ್ಯಾಲೆ ಸುಮ್ಮನೇ ಜೀಕುತಿದೆ
ಎದೆ ಹಿಂಡುತಿದೆ ಅದರ ಕಿರ್ರೆನುವ ದನಿಗೆ
ಹಿಂದೆಂದೋ ಹಾಡಿದ್ದ ಅದೇ ಪಂಚಮಿ ಹಾಡು
ಕಾಡುತಿದೆ ಏಕಿಂದು ಮಂದ ಕಿವಿಗಳೊಳಗೆ?
ಬರಡು ಮನೆಯಂಗಳ ಎದೆಯಂಗಳವೆರಡೂ
ನೀನನಗೆ, ನಾನಿನಗೆ ಗತ ವೈಭವದ ಕುರುಹು
ಅಂದೆಂದೋ ಸುರಿದಿದ್ದ ಪಾರಿಜಾತದ ಘಮಲು
ಗಾಳಿ ತಂದದ್ದೋ ಇಲ್ಲಾ ನಿನ್ನ ಕರುಣೆ ತಂದದ್ದೋ?
ಮುಗಿಲೆತ್ತರಕೆ ಚಿಮ್ಮುತ್ತಾ ನಲಿದಿದ್ದ ನೆನಪು
ಉಂಗುಷ್ಠ ಸೀಳುತ್ತಾ ನೆತ್ತರು ಹರಿದಿದ್ದ ನೆನಪು
ಗುರುತು ಉಳಿಸಿದ ಗಾಯ ನೋವುಳಿಸಲಿಲ್ಲ
ನಲಿದ ಕ್ಷಣಗಳ ನೆನಪೀಗ ನೋವಾಯಿತಲ್ಲ
ಬಲಿತ ಹಕ್ಕಿಗಳೆಲ್ಲಾ ಬಹು ದೂರ ಹಾರಿ
ಮರಿಹಕ್ಕಿಗಳ ರೆಕ್ಕೆ ಹುಡುಕಿ ಹೊಸ ದಾರಿ
ಮರದಲ್ಲಿ ಗೂಡಿಲ್ಲ ಜೋಕಾಲಿಯೊಂದೇ
ಚಿಲಿಪಿಲಿಯ ಸದ್ದಿಲ್ಲ ಮೌನರಾಗವೊಂದೇ
ಇಬ್ಬರೂ ಕಾದಿದ್ದು ಬಡಗಿಗಾಗಿ
ಕರುಣೆಯನ್ನರಿಯದ ಕೊಡಲಿಗಾಗಿ
ನೊಂದ ನೂಲಿಗೆ ಈಗ ಮುಕ್ತಿ ಸಿಗಲಿ
ಮರಿ ಹಕ್ಕಿ ಹೊಸ ಗೂಡು ಕಟ್ಟಿಕೊಳ್ಳಲಿ
✍️-ಸುಮತಿ ಕೃಷ್ಣಮೂರ್ತಿ, ತೋರಣಗಲ್ಲು, ಬಳ್ಳಾರಿ ಜಿ. —–