ಅನುದಿನ ಕವನ-೯೮೯, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಕಾವೇರಿ ನೀರಿನಲಿ ಹರಿವ ಕಲರವದಲ್ಲಿ
ಇಂಪಾದ ಸವಿಯ ನೆನಪು.
ಶ್ರೀರಂಗನೆದುರಲ್ಲಿ ಮಣಿವ ಭವ್ಯತೆಯಲ್ಲಿ
ತಂಪಾದ ರಮ್ಯ ನೆನಪು.

ಕುಂತಿಯಾ ಬೆಟ್ಟದಲಿ ಸಲುವ ದಿವ್ಯತೆಯಲ್ಲಿ
ಸೊಗಸಾದ ಹಸಿರ ನೆನಪು.
ಮೇಲುಕೋಟೆ ಚಲುವಯ್ಯನ ನಗೆಯಮೋಹಕತೆಯಲಿ
ಹೊಳಪಾದ ಸತ್ವ ನೆನಪು.

ಹೊಸಹೊಳಲಿನೊಡಲಿನಲಿ ಕಲೆಯ ತವರಿನುದರದಲಿ
ಬೆಂಬಿಡದ ಪುಣ್ಯನೆನಪು.
ಸೌಮ್ಯತೆಯ ಮಡಿಲಲ್ಲಿ ಸೌಮ್ಯಕೇಶವನೆದುರಲ್ಲಿ
ಸೊಗಸಾದ ಹೊನ್ನ ನೆನಪು.

ಉಗ್ರವಾದ ಮೊಗದಲ್ಲೂ ಶಾಂತಿ ಸಮರಸ ಕಾಯ್ವ
ಮದ್ದೂರ ನರ’ಸಿಂಹ’ ನೆನಪು.
ಜಗಕೆ ಬೆಳಕ ಹರಡೆ ನಿತ್ಯ ಭೋರ್ಗರೆದು ಧುಮುಕೋ
ಗಗನಚುಕ್ಕಿಯ ಸಿರಿಯ ನೆನಪು.

ಮಂಡ್ಯವೆಂದರೆ ಸಾಕು ಸವಿಯ ಸಕ್ಕರೆಯಾಗಿ
ಮಧುಮಧುರ ಮಧುರನೆನಪು.
ಜನದ ಮನದ ಚೆಲುವ ಅರಿತು ಸಾಗುವ ಸುಖದ
ಸಿರಿಯ ಸ್ಮರಣೆಗಳ ಅಚ್ಚಳಿಯದ ನೆನಪು.

-ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
—–