ಬೆಂಗಳೂರು ಸೆ 17:ಸೋಶಿಯಲ್ ಡಾರ್ವಿನಜಂ (Social darvinism) ಗೆ ನಾವು ಅವಕಾಶ ಕೊಡಬಾರದು. ಬಲಾಢ್ಯರು ಮಾತ್ರ ಉಳಿಯಬೇಕು ಎನ್ನುವ ಡಾರ್ವಿನ್ ಸಿದ್ಧಾಂತಕ್ಕೆ ನಾವು ವಿರುದ್ಧ. ಎಲ್ಲರಿಗೂ ನ್ಯಾಯ ಸಿಗುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ನಡೆದ ಮೊದಲ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಲಾಢ್ಯರು ಮಾತ್ರ ಬದುಕಬೇಕು, ಶಕ್ತಿ ಇದ್ದವರಿಗೆ ಮಾತ್ರ ನ್ಯಾಯ ಸಿಗಬೇಕು ಎನ್ನುವ ಡಾರ್ವಿನ್ ಸಿದ್ಧಾಂತದ ಮನಸ್ಥಿತಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದರು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಾ ರಾಜ್ಯಗಳ, ಎಲ್ಲಾ ದೇಶಗಳ ಜನ ನೆಲೆಸಿದ್ದಾರೆ. ಅವರೆಲ್ಲರೂ ನೆಮ್ಮದಿಯಿಂದ, ಖುಷಿಯಿಂದ ಇರಬೇಕು ಎಂದು ಸೂಚಿಸಿದರು.
ದೂರು ಬಂದರೆ ಮಾತ್ರ FIR ದಾಖಲಿಸಬೇಕು ಎನ್ನುವ ಮನಸ್ಥಿತಿ ಬಿಟ್ಟುಬಿಡಿ. ಸ್ವಯಂ ಪ್ರೇರಿತ FIR ದಾಖಲಿಸಿಕೊಂಡು ತನಿಖೆ ನಡೆಸಿದರೆ ಪೊಲೀಸ್ ವ್ಯವಸ್ಥೆಗೆ ಘನತೆ ಬರುತ್ತದೆ. ಅಪರಾಧ ಜಗತ್ತಿಗೆ ಭಯವೂ ಮೂಡುತ್ತದೆ ಎಂದು ಹೇಳಿದರು.
ಸಮಾಜಘಾತುಕ ಶಕ್ತಿಗಳ ಜತೆ ಸ್ನೇಹ ಇಟ್ಟುಕೊಂಡಿರುವ ಅಧಿಕಾರಿಗಳನ್ನೂ ನಾನು ಗಮನಿಸಿದ್ದೇನೆ. ಹೀಗಾದಾಗ ಜನ ಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಬರಲು ಹೇಗೆ ಸಾಧ್ಯ? ಬೇಲಿಯೇ ಎದ್ದು ಹೊಲ ಮೇಯ್ದರೆ ಸಮಾಜದ ರಕ್ಷಣೆ ಹೇಗೆ ಸಾಧ್ಯ ಎಂದು ಜನ ಸಾಮಾನ್ಯರು ಪ್ರಶ್ನಿಸುತ್ತಾರೆ ಎಂದರು.
ಚಾಳಿಬಿದ್ದ ರೌಡಿಗಳನ್ನು ಗಡಿಪಾರು ಮಾಡುವುದು ಹೆಚ್ಚು ಕ್ರಿಯಾಶೀಲವಾಗಿ ನಡೆಯಬೇಕು. ಅವರಿಗೆ ಸಲೀಸಾಗಿ ಜಾಮೀನು ಸಿಗುವಂಥಾಗಬಾರದು ಎಂದು ತಿಳಿಸಿದರು.
ದೂರುದಾರರಿಗೆ ಧೈರ್ಯ ನೀಡುವ ಕೆಲಸ ಪೊಲೀಸ್ ಠಾಣೆಗಳಲ್ಲಿ ಆಗಬೇಕು. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಿರಬೇಕು. ಪೊಲೀಸ್ ಪಡೆ ಹೆಚ್ಚಿಸುವುದೇ ದೊಡ್ಡ ಸಾಧನೆ ಅಲ್ಲ. ಜನರಿಗೆ ಎಷ್ಟು ಸುರಕ್ಷತೆ, ಭದ್ರತೆ, ನ್ಯಾಯ ಸಿಕ್ಕಿದೆ ಎನ್ನುವುದು ಮುಖ್ಯ ಎಂದರು.
ಇಡಿ ಸರ್ವೀಸ್ ನಲ್ಲಿ ಠಾಣೆಗಳಿಗೆ ಭೇಟಿಯನ್ನೇ ನೀಡದ ಹಿರಿಯ ಅಧಿಕಾರಿಗಳಿದ್ದಾರೆ. ಇದು shame ಅಲ್ಲವೇ?ಜನ ಬದಲಾವಣೆ ನಿರೀಕ್ಷಿಸಿ ನಮ್ಮನ್ನು ಅಧಿಕಾರಕ್ಕೆ ಬಂದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಪೊಲೀಸ್ ಇಲಾಖೆ ವರ್ತಿಸಬೇಕು. ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಬಂದ್ ಆಗಬೇಕು ಎಂದು ಹೇಳಿದರು.
SP, DG, IG ಗಳು ಹಾಗೂ ಪೊಲೀಸ್ ಆಯುಕ್ತರು ಮನಸ್ಸು ಪಟ್ಟರೆ ಯಾವುದೇ ಸಂಘಟಿತ ಕಾನೂನು ಬಾಹಿರ ಕೃತ್ಯಗಳು ನಡೆಯಲು ಸಾಧ್ಯವಿಲ್ಲ. ಡಿಸಿಪಿ, ಎಸ್.ಪಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದರೆ ನೀವುಗಳಿದ್ದೂ ಏನು ಪ್ರಯೋಜನ ಹೇಳಿ ಎಂದು ಸಿಎಂ ಪ್ರಶ್ನಿಸಿದರು. ಸೈಬರ್ ಅಪರಾಧಗಳ ತಡೆ ಸವಾಲಿನದ್ದಾಗಿದ್ದು ತಂತ್ರಜ್ಞಾನ ಬಳಕೆ ಮತ್ತು ಕೌಶಲ್ಯವನ್ನು ವಿಶೇಷ ತರಬೇತಿಗಳ ಬಳಿಕ ಅಧಿಕಾರಿಗಳು ಹೆಚ್ಚಿಸಿಕೊಳ್ಳಬೇಕು. ಮಹಾತ್ಮಗಾಂಧಿ ಕನಸಿನಂತೆ ಹೆಣ್ಣು ಮಕ್ಕಳು ಮಧ್ಯರಾತ್ರಿಯಲ್ಲೂ ನಿರಾಂತಕವಾಗಿ ಓಡಾಡುವ ರೀತಿಯ ಸಮಾಜ ನಿರ್ಮಿಸೋಣ ಎಂದರು.
ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.
—–