ಬಳ್ಳಾರಿ, ಸೆ.17: ದೇಶದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ಹೇಳಿದರು.
ಬಳ್ಳಾರಿ ಪೂರ್ವ ವಲಯದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಎಲ್ಲಾ ವೃಂದ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ರಾಘವ ಕಲಾಮಂದಿರದಲ್ಲಿ ಜರುಗಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡು ಕಟ್ಟುವಲ್ಲಿ ಕನ್ನಡ ಶಾಲೆಗಳ ಪಾತ್ರ ಹಿರಿದು. ಸರಕಾರಿ ಕನ್ನಡ ಶಾಲೆಯಲ್ಲಿ ಓದಿದವರೇ ಪ್ರಸ್ತುತ ದೇಶ ಆಳುತ್ತಿದ್ದಾರೆ ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು, ಮಾದರಿ ಶಾಲೆಗಳನ್ನು ರೂಪಿಸುವುದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದರು.
ಬದುಕುವ ಕಲೆಯನ್ನು ಶಿಕ್ಷಕರು ಅತ್ಯುತ್ತಮವಾಗಿ ಕಲಿಸುತ್ತಾರೆ ಎಂದು ಶ್ಲಾಘಿಸಿದರು.
ಪೂರ್ವ ವಲಯದ ಬಿಇಓ ನಯೀಮೂರ್ ರೆಹಮಾನ್ ಅವರು ಮಾತನಾಡಿ, ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಲು ಶ್ರಮಿಸ ಬೇಕು. ಭೋದಿಸುವ ವಿಷಯದಲ್ಲಿ ಹಿಡಿತ ಇರಬೇಕು. ತಮ್ಮ ಮಕ್ಕಳನ್ನು ಪ್ರೀತಿಸುವಂತೆ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು ಎಂದು ಹೇಳಿದರು.
ದೇಶ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಮಾಜಿ ರಾಷ್ಟ್ರಪತಿ ಡಾ. ಎಸ್. ರಾಧಕೃಷ್ಣನ್ ಅವರ ತತ್ವಾದರ್ಶಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕಿನಲ್ಲಿ ಶಿಕ್ಷಕರ ಕೊರತೆಯಿಲ್ಲ. ಅಗತ್ಯವಿದ್ದರೆ 45- 50 ಅತಿಥಿ ಶಿಕ್ಷಕರನ್ನು ಒದಗಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.
ಎಸ್ ಎಸ್. ಎಲ್. ಸಿ ಪರೀಕ್ಷೆಯಲ್ಲಿ ಪೂರ್ವ ವಲಯ ಅತ್ಯುತ್ತಮ ಸಾಧನೆ ಮಾಡಿದೆ. ಶೇ. 86 ಫಲಿತಾಂಶದ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ಯಪಡಿಸಿದ ರೆಹಮಾನ್ ಅವರು
ಮುಂದಿನ ಎರಡು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಸರಕಾರಿ ನೌಕರರ ಗೃಹ ನಿರ್ಮಾಣ ಸಂಘದ ಮುಖಂಡ, ನಿವೃತ್ತ ಮುಖ್ಯಗುರು ಎಂ.ಟಿ.ಮಲ್ಲೇಶ್ ಮಾತನಾಡಿ, ಯಾವ ಸರಕಾರಗಳು ಶಿಕ್ಷಕರನ್ನು ಚೆನ್ನಾಗಿ ನೋಡಿಕೊಳ್ಖುತ್ತವೆ ಆ ರಾಜ್ಯಗಳು ಸುಬೀಕ್ಷವಾಗಿರುತ್ತವೆ ಎಂದು ತಿಳಿಸಿದರು.
ಶಿಕ್ಷಕರ ದಿನಾಚರಣೆಯನ್ನು ಸಾರ್ವಜನಿಕರು, ಇತರೆ ಸಂಘ ಸಂಸ್ಥೆಗಳು ಆಚರಿಸಬೇಕು ಎಂದು ಅಪೇಕ್ಷಿಸಿದರು.
ಮುಖ್ಯ ಅತಿಥಿಯಾಗಿದ್ದ ಸರಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಶಿವಾಜಿರಾವ್, ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯ. ಸರಕಾರಿ ನೌಕರರ ಹೋರಾಟ ಮತ್ತಿತರ ಪ್ರಮುಖ ಕಾರ್ಯಗಳಲ್ಲಿ ಶಿಕ್ಷಕರ ಪಾತ್ರ ಹೆಚ್ಚಿನದಾಗಿರುತ್ತದೆ. ನಮ್ಮ ಸಮಸ್ಯೆ, ಆರ್ಥಿಕ, ನಿವೃತ್ತಿ ಬಳಿಕ ಗೌರಯುತವಾದ ಜೀವನ ನಡೆಸಲು ಸರಕಾರ ಗಮನ ನೀಡಬೇಕು. ಈ ನಿಟ್ಟಿನಲ್ಲಿ ಓಪಿಎಸ್ ಜಾರಿಗೆಗೊಳಿಸ ಬೇಕು ಎಂದು ಒತ್ತಾಯಿಸಿದರು.
ವಿಶೇಷ ಉಪನ್ಯಾಸ ನೀಡಿದ ನಿವೃತ್ರ ಪ್ರಾದ್ಯಾಪಕಿ ಪ್ರೊ. ಸುಶೀಲ ಸಿರೂರು ಅವರು, ಅಕ್ಷರದವ್ವ ಸಾವಿತ್ರಿಬಾಯಿ ಅವರ ಸ್ಥೈರ್ಯ ಧೈರ್ಯಗಳನ್ನು ಶಿಕ್ಷಕರು ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.
ದೇಶ ಹಿಂದುಳಿಯಲು ಜಾತಿ, ಅಸಮಾನತೆ ಕಾರಣ ಎಂದು ಪ್ರತಿಪಾದಿಸಿದರು.
ದಿನಾಚರಣೆಯ ಈ ಸಂದರ್ಭದಲ್ಲಿ ಶಿಕ್ಷಕರು ದೃಢ ಸಂಕಲ್ಪ ಮಾಡಬೇಕು. ನಿಷ್ಕಲ್ಮಶ ಮನಸಿನಿಂದ ಇರಬೇಕು. ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ಮಕ್ಕಳಲ್ಲೂ ಬೆಳೆಸ ಬೇಕು.
ನಮ್ಮನ್ನು ನಾವು ಆತ್ಮಲೋಕನ ಮಾಡಿ ಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಕಾರ್ಯಕ್ರಮ ಉದ್ಘಾಟಿಸಿದರು.
ಪಾಲಿಕೆ ಉಪ ಮೇಯರ್ ಜಾನಕಿ, ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ, ಯುವ ಮುಖಂಡ ಟಿ.ಪಿಸುರೇಶ್, ಶಿಕ್ಷಣ ಇಲಾಖೆಯ ಅದಿಕಾರಿ ಶೇಖರಪ್ಪ ಹೊರಪೇಟಿ, ಬಿಆರ್ ಸಿ ಅಡ್ಡೇರು ಮಲ್ಲಪ್ಪ, ಬಿಸಿಯೂಟ ಅಧಿಕಾರಿ ರೇವಣ್ಣ ಮತ್ತಿತರರು ಗಣ್ಯರು, ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಬಳ್ಳಾರಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 57 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಸಿ ಆರ್ ಪಿ ಗಳನ್ನು ಸತ್ಕರಿಸಲಾಯಿತು.
2023-24 ನೇ ಸಾಲಿನ ಎಸ್ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬಳ್ಳಾರಿ ಪೂರ್ವ ವಲಯದ ಅಧ್ಯಕ್ಷ ಗಿರಿಮಲ್ಲಪ್ಪ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪೂರ್ವ ವಲಯದ ಅಧ್ಯಕ್ಷ ಎನ್ ರಮೇಶ್
ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಾಪಕರುಗಳಾದ ಡಾ. ವೈ.ಕಲ್ಯಾಣಿ, ಜಿ. ಕೋಟೇಶ್ ನಿರೂಪಿಸಿದರು.
—–