ಅನುದಿನ ಕವನ-೯೯೨, ಕವಿ: ಡಾ. ಯು.ಶ್ರೀನಿವಾಸ ಮೂರ್ತಿ, ಬಳ್ಳಾರಿ, ಕವನದ ಶೀರ್ಷಿಕೆ: ಶೋಷಣೆಗಳೂ ಸ್ಮಾರ್ಟ್

ಶೋಷಣೆಗಳೂ ಸ್ಮಾರ್ಟ್

ಶೋಷಣೆಗಳನ್ನೇ ಬಿತ್ತಿ                                  ದರ್ಪಗಳನ್ನೇ ಸಾರಿ!                                          ಭಯದ ನೆರಳಿನಲ್ಲಿನ.                                          ಬಡವರ ಬದುಕನ್ನು ಕಂಡು..                                 ಮೀಸೆ ತಿರುವಿ.. ಗಹಗಹಿಸಿ                                ನಗುತ್ತಿದ್ದ .. .. ಜಮೀನ್ದಾರ                          ಮಲಗಿದ್ದಾನೆ.. ಈಗ                                         ತನ್ನದಲ್ಲದ ಜಮೀನಿನಲ್ಲಿ.

ಸಮಾಧಿಯ ಸುತ್ತ
ಹೊಗೆಯುಗುಳುತ್ತಾ..ಸಾಗುತ್ತಿವೆ!!
ನೂರಾರು ಗಾಡಿಗಳು ಗಡಿಬಿಡಿಯಲ್ಲಿ
ಶವವಾದರೂ ಉಸಿರಾಡಲು
ಹರಸಾಹಸ ಪಡುತ್ತಿದೆ.
ಮೀಸೆ ತಿರುವಿ ಕೂಗಾಡಿದ ಶಬ್ಧ
ಕಾರ್ಖಾನೆಯ ಶಬ್ಧದಲ್ಲಿ.. .. ..ನಿಶ್ಶಬ್ದವಾಗಿದೆ.

ಜಮೀನ್ದಾರನ ಮೊಮ್ಮಗ
ಇಲ್ಲಿ ನೌಕರನಾಗಿ__ _ ದಿನಾ ನೋಡುತ್ತಾನೆ
ಸಮಾಧಿ!!
೪/೬ ಅಡಿಗಳ ಜಾಗ ಮಾತ್ರ ಈಗ ಅವನದು.
ಎರಡು ಹೂ ಹಿಟ್ಟು
ಸುರಿಸುತ್ತಾನೆ—ಎರಡು ಹನಿ
ಕಣ್ಣೀರು..
ಗತ ವೈಭವ ನೆನೆ ನೆನೆದು.

ದರ್ಪಗಳೆಲ್ಲಾ,,ರೂಪಾಂತರವಾಗಿವೆ
ಶೋಷಣೆಗಳು ಸ್ಮಾರ್ಟ್ ಆಗಿವೆ
ಅನ್ನ ಬೆಳೆಯುವ ನೆಲದಲ್ಲಿ !
ಯಂತ್ರಗಳು ನಿಂತು
ಬೆಂಕಿಯುಗುಳುತ್ತಿವೆ!!
ಗಾಳಿಗೆ ವಿಷವ ತೂರುತ್ತಿವೆ!!

ಧಣಿ ಎಲ್ಲೋ ಕೂತಿದ್ದಾನೆ ಎ/ಸಿ
ರೂಮಿನಲ್ಲಿ,ಗಹಗಹಿಸಿ ನಗಲಾರ
ಸ್ಮೂತ್ ಆದ ಚಲನೆ
ಮಿತವಾದ ಮಾತು..
ಸೆನ್‌ಸೆಕ್ಸ್ ಎಷ್ಟೇ ಏರಿದರೂ
ಬೆವರಿನ ಬೆಲೆ ಅಷ್ಟೆ-ಇದೆ

ಬೆವರಿಗೆ, ಬೆವರಿನ ವಾಸನೆಗೆ
ಅತ್ತರ್ ಹೊಡೆಯುವ ಬುದ್ಧಿವಂತರು
ಬಲಿಯುತ್ತಿದ್ದಾರೆ..ನಮ್ಮ ನಡುವೆ.
ಮತ್ತೆ—ಮತ್ತೆ
ಶೋಷಣೆ ಮಾರ್ಡನ್ ಆಗುತ್ತಿದೆ!!!

-ಡಾ. ಯು.ಶ್ರೀನಿವಾಸ ಮೂರ್ತಿ, ಬಳ್ಳಾರಿ