ಹೊಸಪೇಟೆ, ಸೆ.20: ಸಮೀಪದ ಮುನಿರಾಬಾದ್ ನ ವಿಜಯನಗರ ಪಪೂ ಕಾಲೇಜಿನ ಉಪನ್ಯಾಸಕ ಅಂಬಳಿ ವೀರೇಂದ್ರ ಮತ್ತು ಸಂಗೀತಾ ದಂಪತಿ ತಮ್ಮ ಪುತ್ರನ ನಾಮಕರಣಕ್ಕೆ ಆಗಮಿಸಿದ ಬಂಧುಮಿತ್ರರಿಗೆ, ಅತಿಥಿಗಳಿಗೆ ಸಸಿಗಳನ್ನು ನೀಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹೋದ್ಯೋಗಿ ಮಿತ್ರ ದೈಹಿಕ ಶಿಕ್ಷಣ ಶಿಕ್ಷಕ ತಿರುಪತಿ ಇವರು ಬಂದ ಅತಿಥಿಗಳಿಗೆ ವಿವಿಧ ಬಗೆಯ ಸಸಿಗಳನ್ನು ಉಡುಗೊರೆಯಾಗಿ ನೀಡಲು ವ್ಯವಸ್ಥೆಗೊಳಿಸಿದ್ದರು.
ಆಧುನಿಕತೆಯ ಕಾಲಘಟ್ಟದಲ್ಲಿ ವಿವಿಧ ಶುಭ ಸಮಾರಂಭಗಳಲ್ಲಿ ಬಂದ ಅತಿಥಿಗಳಿಗೂ ಬಟ್ಟೆ, ಸ್ಟೀಲ್, ಬೆಳ್ಳಿ ಆಭರಣ, ವಿವಿಧ ಪರಿಕರದ ಬಾಕ್ಸ್ ಗಳನ್ನು ಉಡುಗೊರೆಯಾಗಿ ನೀಡುವುದು ಸರ್ವೆ ಸಾಮಾನ್ಯವಾಗಿರುತ್ತದೆ. ಆದರೆ ವೀರೇಂದ್ರ ಅವರು ಪುತ್ರನ ನಾಮಕರಣದಲ್ಲಿ ಪರಿಸರ ಜಾಗೃತಿಗಾಗಿ ಸಸಿಗಳನ್ನು ನೀಡಿದ್ದು ಇತರರಿಗೆ ಮಾದರಿಯಾಗಿದೆ.
ಅತಿಥಿಗಳಿಗೆ ದಾಸವಾಳ, ಕಾಡ ಮಂಡಲ,ಅಶೋಕ, ಮಲ್ಲಿಗೆ,ಬೇವಿನಮರ,ಕರೆಬೇವು, ಗ್ರೀನ್ ಪಾಕ್ ಸೇರಿದಂತೆ ವಿವಿಧ ಜಾತಿಗಳ 150ಕ್ಕೂ ಹೆಚ್ಚು ವಿವಿಧ ತಳಿಯ ಸಸಿಗಳನ್ನು ವಿತರಣೆ ಮಾಡಿ ಅವುಗಳನ್ನು ನೆಟ್ಟು ಪೋಷಣೆ ಮಾಡುವಂತೆ ಮನವಿ ಮಾಡಿದ್ದು ಗಮನ ಸೆಳೆಯಿತು.
ಕೌಟುಂಬಿಕ ನಾಮಕರಣ, ವಿವಾಹ, ನಿಶ್ಚಿತಾರ್ಥ ಮುಂತಾದ ಕಾರ್ಯಕ್ರಮಗಳಲ್ಲೂ ಸಸಿಗಳನ್ನು ಬರುವ ಅತಿಥಿಗಳಿಗೆ ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ ಎಂದು ಉಪನ್ಯಾಸಕ ತಿರುಪತಿ ಮನವಿ ಮಾಡಿದರು..
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಬಸವರಾಜ, ಎಸ್.ಬಿ.ಬಿ.ಎನ್. ಕಾಲೇಜಿನ ಪ್ರಾಚಾರ್ಯ ವಿಶ್ವನಾಥ,ಫಕ್ಕೀರಪ್ಪ, ಉಪನ್ಯಾಸಕರಾದ ಟಿ.ದೇವಪ್ಪ, ಮಲ್ಲಿಕಾರ್ಜನ್ ಬಿದರಕುಂದಿ, ಮಲ್ಲಿಕಾರ್ಜನ್ ಇಟ್ಟಗಿ, ತಿರುಪತಿ ನಾಯಕ, ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ, ಮುಖ್ಯ ಶಿಕ್ಷಕ ಶಿವಪ್ರಕಾಶ್,ಹಿರಿಯ ಅರೋಗ್ಯ ನಿರೀಕ್ಷಕ ಜಿ.ಸೋಮಶೇಖರ್, ಮಲ್ಲಿಕಾರ್ಜುನ, ಮಂಜಣ್ಣ, ಉಪನ್ಯಾಸಕರಾದ ಕೊಟ್ರೇಶ,ಸವಿತಾ, ಪವಿತ್ರ, ಕವಿತಾ, ಬಾಬುಸಿಂಗ್,ನವೀನ, ಅಂಜಿನಪ್ಪ,ಹೆಚ್,ಗಣೇಶ,ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಹಂಪಾಪಟ್ಟಣ ಎ.ಕೇಶವಮೂರ್ತಿ, ಮಂಜುನಾಥ, ಮಾರುತಿ,ಪ್ರಭು ಕುಮಾರ, ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.
ವೀರೇಂದ್ರ ಅಂಬಳಿ ಅವರು ಮೂಲತಃ ಹಂಪಾಪಟ್ಟಣ ಗ್ರಾಮದವರು. ದಶಕಗಳ ಕಾಲ ಪ್ರಜಾವಾಣಿ ಪತ್ರಿಕಾ ವಿತರಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
—–