ಅನುದಿನ ಕವನ-೯೯೫, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಚಿತ್ರಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ

ಮಂಜಿನೊಡನೆ ಬೆಳಕೂಡುವ ರವಿ
ಮತ್ತೆ ಬರುವನು

ನಿತ್ಯಬರುವನು ಎದುರು ಬದರಾಗಿ
ಹಲವು ಬಣ್ಣಗಳ ಹಲವು ದೇಶಗಳ
ಬಹುತ್ವದ ಕಣ್ಣಾಗಿ

ಕತ್ತಲಿದ್ದರೂ ಬೆಳಕು ಮೂಡಿಸುವುದಷ್ಟೇ ಗೊತ್ತು
ಅವನಿಗೆ
ಜಗಳವಿಲ್ಲದ ಸ್ವಾರ್ಥವಿಲ್ಲದ
ಕೊಲ್ಲುವ ಕವಣೆಯಲ್ಲದ
ಹೂ ಬೇರಿನ ಮನುಷ್ಯ!

ಸೂರ್ಯನೆಂದರೆ ನೂರು ತಾಪತ್ರಯಗಳು ದೂರ
ಮಡುಗಟ್ಟಿದ ದುಃಖವ ದೂರ ಮಾಡಿದ ಗೆಳೆಯನಂತೆ
ಮಗಳಿಗೆ ಹೂ ಮುಡಿಸಿ ಸಾಲೆಗೆ ಕಳಿಸುವ ತಾಯಿಯಂತೆ
ಜೊತೆಗೂಡಿ ಸಂಗೀತವಾಗುವ ಸಂಗಾತಿಯಂತೆ
ಬರುವ ಸೂರ್ಯನಿವನು

ಅಕ್ಕರೆಯ ರವಿ
ಸವಿ ಸಕ್ಕರೆಯ ರವಿ
ಕನಸಿನಲ್ಲೂ ಕನಸುಣಿಯಾದ ರವಿ
ನಿಗಿ ನಿಗಿ ಕೆಂಡದಂತಿದ್ದರೂ ಬಾಳನ್ನು ಸುಡದೆ
ಒಡಲ ಅನ್ನವಾಗುವ ರವಿ

ಮಂಜಿನೊಡನೆ ಬೆಳಕೂಡುವ ರವಿ
ಮತ್ತೆ ಬರುವನು
ಜಗಕೆ ‘ಹೊತ್ತು’ತರುವನು
—–
(ಹೊತ್ತು=ಸಮಯ)

🪶-ಡಾ.ನಿಂಗಪ್ಪ ಮುದೇನೂರು, ಧಾರವಾಡ
*****